'ಕೆ.ಎಸ್.ಈಶ್ವರಪ್ಪ ಬಿಜೆಪಿಯ ಮುಂದಿನ ಮುಖ್ಯಮಂತ್ರಿ..': ಕುತೂಹಲ ಹುಟ್ಟಿಸಿದ 'ಫೇಸ್‍ಬುಕ್' ಅಕೌಂಟ್

Update: 2018-03-23 14:24 GMT

ಶಿವಮೊಗ್ಗ, ಮಾ. 23: ಒಂದೆಡೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತ್ಯದಿಕ ಸ್ಥಾನಗಳಲ್ಲಿ ಜಯ ಸಾಧಿಸಲಿದೆ, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಅವರ ಬೆಂಬಲಿಗರು, ಕೆ.ಎಸ್.ಈಶ್ವರಪ್ಪರವರೇ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿರುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಸಂಪರ್ಕ ಜಾಲತಾಣ 'ಫೇಸ್‍ಬುಕ್'ನಲ್ಲಿ 'ಕೆ.ಎಸ್.ಈಶ್ವರಪ್ಪ ಬಿಜೆಪಿಯ ಮುಂದಿನ ಮುಖ್ಯಮಂತ್ರಿ....' ಎಂಬ ಖಾತೆಯನ್ನು ಬೆಂಬಲಿಗರು ತೆರೆದಿದ್ದಾರೆ. ಕಳೆದ ಹಲವು ವರ್ಷಗಳ ಹಿಂದಿನಿಂದಲೇ ಈ ಪೇಜ್ ಸಕ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಅಕೌಂಟ್ ನಾನಾ ಕಾರಣಗಳಿಂದ ಜಾಲತಾಣಿಗರ ಗಮನ ಸೆಳೆಯುತ್ತಿದೆ. ಈ ಅಕೌಂಟ್ ತಯಾರಿಸಿದವರು ಯಾರು ಎಂಬ ವಿವರಗಳು ಲಭ್ಯವಾಗಿಲ್ಲ. ಈ ಗ್ರೂಪ್‍ಗೆ 5380 ಲೈಕ್ ಹಾಗೂ 5408 ಫಾಲೋವರ್ಸ್‍ಗಳಿದ್ದಾರೆ. ಪ್ರೊಫೈಲ್‍ಗೆ ಕೆ.ಎಸ್.ಈಶ್ವರಪ್ಪರ ಫೋಟೋ ಹಾಕಲಾಗಿದ್ದು, ಸಮಾರಂಭವೊಂದರಲ್ಲಿ ಭಾಗವಹಿಸಿರುವ ಜನಸ್ತೋಮದ ಚಿತ್ರವನ್ನು ಕವರ್ ಫೋಟೋವಾಗಿ ಬಳಕೆ ಮಾಡಲಾಗಿದೆ.

ಕೆ.ಎಸ್.ಈಶ್ವರಪ್ಪರವರು ಭಾಗವಹಿಸಿದ ಕಾರ್ಯಕ್ರಮಗಳು ಚಿತ್ರ ಮಾಹಿತಿ, ಅವರ ರಾಜಕೀಯ ಜೀವನದ ಮಹತ್ವದ ಫೋಟೋಗಳನ್ನು ಈ ಪೇಜ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೆ ಸಂಬಂಧಿಸಿದ ಫೋಟೋ, ಅಭಿಪ್ರಾಯ, ವರದಿಗಳನ್ನು ಫಾಲೋವರ್ಸ್‍ಗಳು ಈ ಪೇಜ್‍ನಲ್ಲಿ ಟ್ಯಾಗ್ ಮಾಡಿದ್ದಾರೆ. ಈ ಪೇಜ್ ಆರಂಭವಾಗಿ ಕೆಲ ವರ್ಷಗಳಾದರೂ ಬಿಜೆಪಿಯಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಸ್ತುತ ಜಾಲತಾಣದಲ್ಲಿ ಈ ಪೋಸ್ಟ್ ಸಾಕಷ್ಟು ಸದ್ದು ಮಾಡಲಾರಂಭಿಸಿದೆ. ಜಾಲತಾಣಿಗರ ಗಮನ ಸೆಳೆಯುತ್ತಿದೆ. ಕುತೂಹಲದಿಂದ ಈ ಪೇಜ್‍ಗೆ ಭೇಟಿಯಿತ್ತು ಪರಿಶೀಲಿಸಲಾರಂಭಿಸಿದ್ದಾರೆ.

ಘೋಷಣೆ ಕೂಗಿದ್ದರು!: ಇತ್ತೀಚೆಗೆ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ವಿವಾದ ಭುಗಿಲೆದ್ದಿತ್ತು.  ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯೊಂದರಲ್ಲಿ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡದೆ, ಎಸ್.ರುದ್ರೇಗೌಡರನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಮಾಡಲಾಗಿತ್ತು. ಈ ಸಭೆಯಲ್ಲಿ ಮುಖಂಡರೋರ್ವರು ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಠೇವಣಿಯೂ ಸಿಗುವುದಿಲ್ಲ ಎಂಬ ಮಾತನ್ನಾಡಿದ್ದರು. ಈ ಹೇಳಿಕೆಯ ಬಗ್ಗೆ ಸ್ವತಃ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದರು. ಮತ್ತೊಂದೆಡೆ ಅವರ ಬೆಂಬಲಿಗರು ಬಿಜೆಪಿ ಕಚೇರಿಯ ಮುಂಭಾಗ ಪ್ರತಿಭಟನೆ ಕೂಡ ನಡೆಸಿದ್ದರು. ಈಶ್ವರಪ್ಪರ ವಿರುದ್ದ ಹೇಳಿಕೆ ನೀಡಿದ ಮುಖಂಡರ ಉಚ್ಚಾಟನೆಗೆ ಒತ್ತಾಯಿಸಿದ್ದರು. ಈ ವೇಳೆ 'ಮುಂದಿನ ಮುಖ್ಯಮಂತ್ರಿ. ಕೆ.ಎಸ್.ಈಶ್ವರಪ್ಪ ಝಿಂದಾಬಾದ್...' ಎಂಬ ಘೋಷಣೆ ಕೂಡ ಕೂಗಿದ್ದರು.

'ಈಶ್ವರಪ್ಪರವರು ಹಿಂದುಳಿದ ವರ್ಗಕ್ಕೆ ಸೇರಿದ ಹಿರಿಯ ನಾಯಕರಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಅವರಿಗಿದೆ. ಮುಂದೊಂದು ದಿನ ಅವರು ಸಿಎಂ ಆಗಬಹುದು. ರಾಜಕಾರಣದಲ್ಲಿ ಯಾವುದನ್ನೂ ಊಹಿಸಲು ಅಸಾಧ್ಯವಾಗಿದೆ. ಏನೂ ಬೇಕಾದರೂ ನಡೆಯಬಹುದು' ಎಂದು ಹೆಸರೇಳಲಿಚ್ಚಿಸದ ಈಶ್ವರಪ್ಪರ ಆಪ್ತ ಬೆಂಬಲಿಗರೋರ್ವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಶಿವಮೊಗ್ಗದ ಮನೆಗೆ ಬರುತ್ತಿದ್ದಾರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ!

ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರು ಮಾ. 26 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರು ನಗರದ ಗುಂಡಪ್ಪಶೆಡ್ ಬಡಾವಣೆಯಲ್ಲಿರುವ ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಆಗಮಿಸಿ, ಅಲ್ಲಿ ಏರ್ಪಡಿಸಲಾಗಿರುವ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಔತಣಕೂಟದಲ್ಲಿ ಬಿ.ಎಸ್.ಯಡಿಯೂರಪ್ಪ ಕೂಡ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಧಿಸಿದಂತೆ ಇತ್ತೀಚೆಗೆ ಉಂಟಾಗಿದ್ದ ಗೊಂದಲದ ವೇಳೆ, ಅಮಿತ್ ಶಾರವರು ಕೆ.ಎಸ್.ಈಶ್ವರಪ್ಪ ಜೊತೆ ಸಮಾಲೋಚನೆ ನಡೆಸಿ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂಬ ಮಾತು ಕೇಳಿಬಂದಿತ್ತು. ಹಾಗೆಯೇ ರಾಜ್ಯದ ವಿವಿಧೆಡೆ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಸ್ವತಃ ಅಮಿತ್ ಶಾ ಬೆನ್ನಿಗೆ ನಿಂತುಕೊಂಡಿದ್ದು ಪಕ್ಷದಲ್ಲಿ ಈಶ್ವರಪ್ಪ ಪ್ರಭಾವ ಹೆಚ್ಚಾಗುವಂತೆ ಮಾಡಿತ್ತು. ಇದೀಗ ಅಮಿತ್ ಶಾ ಈಶ್ವರಪ್ಪರ ನಿವಾಸದಲ್ಲಿ ಆಯೋಜಿಸಲಾಗಿರುವ ಔತಣ ಕೂಟದಲ್ಲಿ ಭಾಗವಹಿಸುತ್ತಿರುವುದು, ಅವರ ಬೆಂಬಲಿಗರಲ್ಲಿ ಮತ್ತಷ್ಟು ಹುರುಪು ಸೃಷ್ಟಿಯಾಗುವಂತೆ ಮಾಡಿದೆ.

ಬಣ ರಾಜಕಾರಣಕ್ಕೆ ಬೀಳಲಿದೆಯೇ ಪೂರ್ಣ ವಿರಾಮ?

ಶಿವಮೊಗ್ಗ ಜಿಲ್ಲಾ ಬಿಜೆಪಿ ಪಾಳೇಯದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಬಣಗಳು ಸಕ್ರಿಯವಾಗಿರುವುದು ಸುಳ್ಳಲ್ಲ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಆರಂಭಿಸಿದ್ದ ವೇಳೆ ಎರಡೂ ಬಣಗಳ ಕಾರ್ಯಕರ್ತರು ಶಿವಮೊಗ್ಗ ನಗರದ ಬಿಜೆಪಿ ಕಚೇರಿಯ ಆವರಣದಲ್ಲಿಯೇ ಹೊಡೆದಾಡಿಕೊಂಡಿದ್ದರು. ಇದಾದ ನಂತರ ಪಕ್ಷದ ಒಳಗೊಳಗೆ ಬಣ ರಾಜಕಾರಣ ಮುಂದುವರಿದಿತ್ತು. ಶೀತಲ ಸಮರ ನಡೆಯುತ್ತಲೇ ಇತ್ತು. ಇತ್ತೀಚೆಗೆ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿಯೂ ಬಣ ರಾಜಕಾರಣ ಮತ್ತೊಮ್ಮೆ ಬಹಿರಂಗಗೊಂಡಿತ್ತು.

ಇದರಿಂದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿಗೆ ವೇದಿಕೆಯಾಗುವ ಲಕ್ಷಣಗಳು ಗೋಚರವಾಗಿದ್ದವು. ನಂತರ ಪಕ್ಷದ ವರಿಷ್ಠರು ಮಧ್ಯಪ್ರವೇಶಿಸಿ ಬಣ ರಾಜಕಾರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದರು. ಮಾ. 26 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಅಮಿತ್ ಶಾರವರು ಜಿಲ್ಲಾ ಬಿಜೆಪಿಯಲ್ಲಿರು ಬಣ ರಾಜಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕುವ ಲಕ್ಷಣಗಳು ಗೋಚರವಾಗುತ್ತಿವೆ. ಈ ಕಾರಣದಿಂದಲೇ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಆಯೋಜಿತವಾಗಿರುವ ಔತಣಕೂಟಕ್ಕೆ ಬಿ.ಎಸ್.ಯಡಿಯೂರಪ್ಪರಿಗೂ ಆಹ್ವಾನ ನೀಡಲಾಗಿದೆ. ಈ ಇಬ್ಬರು ಮುಖಂಡರ ನಡುವೆ ಮನೆ ಮಾಡಿರುವ ವೈಮನಸ್ಸು ಹೋಗಲಾಡಿಸಿ, ಒಗ್ಗೂಡಿಸುವ ಕೆಲಸಕ್ಕೆ ಅಮಿತ್ ಶಾ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News