ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ: ರಾಜ್ಯ ಸರಕಾರದ ಶಿಫಾರಸ್ಸು ತಿರಸ್ಕರಿಸಲು ಚಿದಾನಂದಮೂರ್ತಿ ಆಗ್ರಹ

Update: 2018-03-23 14:55 GMT

ಬೆಂಗಳೂರು, ಮಾ.23: ವೀರಶೈವ ಹಾಗೂ ಲಿಂಗಾಯತರು ನೂರಕ್ಕೆ ನೂರರಷ್ಟು ಹಿಂದೂಗಳೇ ಆಗಿದ್ದಾರೆ. ಆದುದರಿಂದಾಗಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ರಾಜ್ಯ ಸರಕಾರ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರಕಾರ ತಿರಸ್ಕರಿಸಬೇಕು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತ್ಯೇಕ ಧರ್ಮ ಮಾಡಬೇಕು ಎಂದು ಕೇಂದ್ರಕ್ಕೆ ಕಳಿಸಿರುವುದು ಖಂಡನೀಯ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ, ಸಿದ್ಧರಾಮ ಎಲ್ಲರೂ ವೀರಶೈವರು ಎಂದು ಗುರುತಿಸಿಕೊಂಡಿದ್ದಾರೆ. ಹೀಗಾಗಿ, ವೀರಶೈವ-ಲಿಂಗಾಯತ ಬೇರೆ ಬೇರೆಯಲ್ಲ. ಆದುದರಿಂದಾಗಿ ರಾಜ್ಯ ಸರಕಾರ ತನ್ನ ಶಿಫಾರಸ್ಸನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ವೀರಶೈವ ಮತ್ತು ಲಿಂಗಾಯತ ಧರ್ಮ ಬಸವಣ್ಣನಿಗಿಂತ ಹಿಂದಿನದ್ದಾಗಿದ್ದು, ಅದರಲ್ಲಿದ್ದ ಕ್ರಾಂತಿಕಾರಿಕ ತತ್ವಗಳಿಗೆ ಮನಸೋತು ಬಸವಣ್ಣ ಬ್ರಾಹ್ಮಣ್ಯವನ್ನು ತ್ಯಜಿಸಿ ವೀರಶೈವ ಪಂಥವನ್ನು ಸೇರಿದ್ದರು. ಬಸವಣ್ಣ ವೀರಶೈವ ಸಂಪನ್ನನೆನಿಸಿ ಲಿಂಗವಂತನಾದ ಬಳಿಕ ಮುಕ್ತ ವೀರಮಾಹೇಶ್ವರನು ಕ್ರಿ.ಶ.1100ರಲ್ಲಿದ್ದ ಕೊಂಡಗುಳಿ ಕೇಶಿರಾಜನು ವೀರಶೈವ ಲಿಂಗಾಯತ ಎಂಬ ಪದಗಳನ್ನು ಬಳಸಿದ್ದಾನೆ ಎಂದು ಅವರು ಹೇಳಿದರು.

ವೀರಶೈವ ಹಾಗೂ ಲಿಂಗಾಯತರು ಹಿಂದು ಧರ್ಮದವರಲ್ಲವೇ ಎಂಬ ಪ್ರಶ್ನೆ ಉದ್ಭವಿಸಲು ಮೂಲ ಕಾರಣ ಎಂಥೊವೆನ್ ಎಂಬ ಬ್ರಿಟಿಷ್ ಅಧಿಕಾರಿ. ಬ್ರಿಟಿಷರು ಸೀಳು, ಆಳು ಎಂಬ ಧೋರಣೆಯಿಂದಾಗಿ 1900ರಲ್ಲಿ ಮುಂಬೈ ಜನಗಣತಿ ಅಧಿಕಾರಿಯಾಗಿದ್ದ ಎಂಥೊವೆನ್ ಮುಂಬೈ ಕರ್ನಾಟಕ ಭಾಗದಲ್ಲಿ ಬಹುಸಂಖ್ಯಾತರಾಗಿದ್ದ ಲಿಂಗಾಯತರು ಹಿಂದೂಗಳಲ್ಲವೆಂದು ಅವರನ್ನು ಶೂದ್ರರೆಂದೂ ತೀರ್ಮಾನ ಕೈಗೊಂಡಿದ್ದ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News