ಶೇರುಪೇಟೆಯಲ್ಲಿ ಭಾರೀ ಕುಸಿತ: ಹೂಡಿಕೆದಾರರಿಗೆ 1.57 ಲ.ಕೋ.ರೂ.ಸಂಪತ್ತು ನಷ್ಟ

Update: 2018-03-23 16:34 GMT

ಮುಂಬೈ,ಮಾ.23: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದ ಆತಂಕಗೊಂಡ ಹೂಡಿಕೆದಾರರು ಶುಕ್ರವಾರ ಭಾರೀ ಪ್ರಮಾಣದಲ್ಲಿ ಶೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಭಾರತೀಯ ಶೇರು ಮಾರುಕಟ್ಟೆ ಭಾರೀ ಕುಸಿತವನ್ನು ಕಂಡಿದ್ದು, ಹೂಡಿಕೆದಾರರು ಒಂದೇ ದಿನದಲ್ಲಿ 1.57 ಲ.ಕೋ.ರೂ.ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಮುಂಬೈ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ 409.73 ಅಂಶಗಳಷ್ಟು ಕುಸಿದು ದಿನದಂತ್ಯಕ್ಕೆ ಐದು ತಿಂಗಳ ಕನಿಷ್ಠ ಮಟ್ಟವಾದ 32,596.54ಕ್ಕೆ ಮುಕ್ತಾಯಗೊಂಡಿದ್ದರೆ, ರಾಷ್ಟ್ರೀಯ ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ 10,000ಕ್ಕೂ ಕೆಳಗೆ ಕುಸಿದಿದೆ. 116.7 ಅಂಶಗಳನ್ನು ಕಳೆದುಕೊಂಡು 9998.05ಕ್ಕೆ ಅಂತ್ಯಗೊಂಡಿದೆ.

ಶುಕ್ರವಾರದ ಕುಸಿತದಿಂದಾಗಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು 1,57,268.54 ಕೋ.ರೂ.ಗಳಷ್ಟು ಕುಸಿದು 1,39,30,643 ಕೋ.ರೂ. ಗಳಿಗೆ ಇಳಿಕೆಯಾಗಿದೆ.

ಸೆನ್ಸೆಕ್ಸ್ ಗುಚ್ಛದ 30 ಶೇರುಗಳ ಪೈಕಿ 24 ಶೇರುಗಳು ನಷ್ಟದಲ್ಲಿ ಅಂತ್ಯಗೊಂಡಿದ್ದು, ಯಸ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕುಗಳು ಶೇ.4ರವರೆಗೆ ಹಾನಿಯನ್ನು ಅನುಭವಿಸಿವೆ. ರಿಯಾಲ್ಟಿ ಕ್ಷೇತ್ರವು ಶೇ.3.31, ಲೋಹಗಳು ಶೇ.2.89 ಮತ್ತು ಬ್ಯಾಂಕೆಕ್ಸ್ ಶೇ.2.08 ನಷ್ಟವನ್ನು ದಾಖಲಿಸಿವೆ.

1,394 ಕೋ.ರೂ.ಗಳ ಇನ್ನೊಂದು ಬ್ಯಾಂಕ್ ವಂಚನೆಯು ಬೆಳಕಿಗೆ ಬಂದ ನಂತರ ಬ್ಯಾಂಕುಗಳ ಶೇರುಗಳು ತೀವ್ರ ಹಿನ್ನಡೆಯನ್ನು ಅನುಭವಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News