"ನೋಟು ರದ್ದತಿ ಹುಚ್ಚು ನಿರ್ಧಾರ ಎಂದು ಚಿದಂಬರಂ ಹೇಳಿದ್ದರು"

Update: 2018-03-24 09:07 GMT

ಮೈಸೂರು, ಮಾ. 24: ನೋಟು ರದ್ದತಿ ಮತ್ತು ಜಿಎಸ್‌ಟಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇವೆರಡು ಭಾರತದ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರಮಾಣದ ಹಾನಿ ಮಾಡಿವೆ ಎಂದು ಆಪಾದಿಸಿದ್ದಾರೆ.

"ನೋಟು ರದ್ದತಿ ದೊಡ್ಡ ಪ್ರಮಾದ. ಅದನ್ನು ಮಾಡಬಾರದಿತ್ತು. ನೋಟು ರದ್ದತಿ ಹಾಗೂ ಜಿಎಸ್‌ಟಿ ಭಾರತದ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಹಾನಿ ಮಾಡಿದೆ. ನೋಟು ರದ್ದತಿ ಮಾಡಿದ ವಿಧಾನದ ಬಗ್ಗೆ ನನ್ನ ಆಕ್ಷೇಪವಿದೆ. ಆರ್‌ಬಿಐ ಗವರ್ನರ್, ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವ ಹೀಗೆ ಯಾರಿಗೂ ಇದು ತಿಳಿದಿರಲಿಲ್ಲ. ನಾನು ಚಿದಂಬರಂ ಅವರಿಗೆ ಕರೆ ಮಾಡಿದಾಗ ಅವರು ಇದೊಂದು ಹುಚ್ಚು ನಿರ್ಧಾರ ಎಂದು ಹೇಳಿದರು ಎಂಬುದಾಗಿ ರಾಹುಲ್, ಮಹಾರಾಣೀಸ್ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜತೆ ನಡೆಸಿದ ಸಂವಾದದಲ್ಲಿ ಸ್ಪಷ್ಟಪಡಿಸಿದರು.

ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನೀರವ್ ಮೋದಿ 22 ಸಾವಿರ ಕೋಟಿ ಬ್ಯಾಂಕ್ ಹಣ ಒಯ್ದರು. ನಿಮ್ಮಂಥ ಯುವಜನಾಂಗಕ್ಕೆ ಈ ಹಣ ಸಿಕ್ಕಿದ್ದರೆ ಎಷ್ಟು ಉದ್ದಿಮೆಗಳು ಸೃಷ್ಟಿಯಾಗುತ್ತಿದ್ದವು ಗೊತ್ತೇ" ಎಂದು ಪ್ರಶ್ನಿಸಿದರು.

ಆರ್ಥಿಕತೆಯಾಗಿ ನಾವು ಒಳ್ಳೆಯ ಬೆಳವಣಿಗೆ ಕಾಣುತ್ತಿದ್ದೇವೆ. ಆದರೆ ಉದ್ಯೋಗ ಸೃಷ್ಟಿಯಲ್ಲಲ್ಲ. ಏಕೆಂದರೆ ಕೌಶಲ ಇರುವವರಿಗೆ ಹಣಕಾಸು ಲಭ್ಯತೆ ಮತ್ತು ಬೆಂಬಲ ಇಲ್ಲ. ಏಕೆಂದರೆ ದೊಡ್ಡ ಮೊತ್ತದ ಹಣ 15- 20 ಮಂದಿಯ ಕೈಯಲ್ಲಿದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News