ಬಿಜೆಪಿ ಟಿಕೆಟ್‍ಗೆ ಮತ್ತೆ ಶುರುವಾಗಿದೆ ಪೈಪೋಟಿ: ಪಟ್ಟು ಸಡಿಲಿಸದ ಬಿಎಸ್ ವೈ ಬಂಟ

Update: 2018-03-24 13:43 GMT

ಅಮಿತ್ ಶಾಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳಲ್ಲೇ ಶಕ್ತಿ ಪ್ರದರ್ಶನ

ಶಿವಮೊಗ್ಗ, ಮಾ. 24: ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಬಹುತೇಕ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಖಚಿತವೆಂಬ ಮಾತುಗಳು ಕೇಳಿಬಂದಿದ್ದವು. ಇನ್ನೊಂದೆಡೆ ಬಿ.ಎಸ್.ಯಡಿಯೂರಪ್ಪ ಆಪ್ತ ಎಸ್.ರುದ್ರೇಗೌಡರವರು, ಟಿಕೆಟ್‍ಗೆ ಹಿಡಿದಿರುವ ಬಿಗಿಪಟ್ಟು ಮುಂದುವರಿಸಿದ್ದಾರೆ. ಶತಾಯಗತಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಯತ್ನಿಸುತ್ತಿದ್ದು, ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

ಇದಕ್ಕೆ ಸಾಕ್ಷಿ ಎಂಬಂತೆ, ಮಾ. 26 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಶುಭ ಕೋರುವ ಫ್ಲೆಕ್ಸ್ ಗಳನ್ನು ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಎಸ್.ರುದ್ರೇಗೌಡ ಮತ್ತವರ ಬೆಂಬಲಿಗರು ನಗರದ ವಿವಿಧೆಡೆ ಹಾಕಿಸಿದ್ದಾರೆ. ಇನ್ನೊಂದೆಡೆ ತಾವೇನು ಕಡಿಮೆ ಎಂಬಂತೆ ಕೆ.ಎಸ್.ಈಶ್ವರಪ್ಪ ಮತ್ತವರ ಬೆಂಬಲಿಗರು ಕೂಡ ಫ್ಲೆಕ್ಸ್ ಹಾಕಿಸಿದ್ದಾರೆ. ಈ ಇಬ್ಬರು ಟಿಕೆಟ್ ಆಕಾಂಕ್ಷಿಗಳು 'ಫ್ಲೆಕ್ಸ್' ಮೂಲಕ ತಮ್ಮ ಬಲ ಪ್ರದರ್ಶನ ತೋರ್ಪಡಿಸಲು ಮುಂದಾಗಿರುವುದು, ಸ್ಥಳೀಯ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ.

ಹೈಡ್ರಾಮಾ: ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡದೆ, ಎಸ್.ರುದ್ರೇಗೌಡರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬ ಆಗ್ರಹವನ್ನು ಕೆಲ ನಾಯಕರು ಮಾಡಿದ್ದರು. ಈ ಬೆಳವಣಿಗೆಯ ನಂತರ ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಹಲವು ಹೈಡ್ರಾಮಾಗಳು ನಡೆದಿದ್ದವು. ಯಡಿಯೂರಪ್ಪ - ಈಶ್ವರಪ್ಪ ಬಣಗಳ ಕಾದಾಟಕ್ಕೂ ಆಸ್ಪದ ಉಂಟುಮಾಡಿತ್ತು. ಇದು ಇಡೀ ರಾಜ್ಯದ ಗಮನ ಸೆಳೆದಿತ್ತು. ಮತ್ತೊಂದೆಡೆ ಈಶ್ವರಪ್ಪರವರು ಮತ್ತೊಮ್ಮೆ ಯಡಿಯೂರಪ್ಪ ವಿರುದ್ದ ಬಂಡೇಳುವ ಲಕ್ಷಣಗಳು ಗೋಚರವಾಗಿದ್ದವು. ಇದೆಲ್ಲದರ ನಡುವೆ ಈಶ್ವರಪ್ಪರನ್ನೇ ಶಿವಮೊಗ್ಗದಿಂದ ಕಣಕ್ಕಿಳಿಸಲು ಪಕ್ಷದ ಕೇಂದ್ರ ವರಿಷ್ಠರು ನಿರ್ಧರಿಸಿದ್ದಾರೆಂಬ ಮಾತುಗಳು ಬಿಜೆಪಿ ಪಾಳೇಯದಿಂದ ಕೇಳಿಬಂದಿದ್ದವು. ಆದರೆ ಈ ಕುರಿತಂತೆ ಯಾವುದೇ ಅಧಿಕೃತ ಹೇಳಿಕೆಗಳು ಪಕ್ಷದ ವರಿಷ್ಠರು ನೀಡಿರಲಿಲ್ಲ. ಟಿಕೆಟ್ ಆಕಾಂಕ್ಷಿ ಎಸ್.ರುದ್ರೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಈ ನಡುವೆ ಎಸ್.ರುದ್ರೇಗೌಡರನ್ನು ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಈ ಕುರಿತಂತೆ ಬಿಜೆಪಿ ಮುಖಂಡರು ಗಂಭೀರ ಆಲೋಚನೆ ಕೂಡ ನಡೆಸಿದ್ದರು. ಆದರೆ ಭದ್ರಾವತಿಯಿಂದ ಕಣಕ್ಕಿಳಿಯಲು ಎಸ್.ರುದ್ರೇಗೌಡ ನಿರಾಸಕ್ತಿ ಹೊಂದಿದ್ದರು. ಪಕ್ಷದ ವರಿಷ್ಠರಿಗೂ ಈ ಬಗ್ಗೆ ಸ್ಪಷ್ಟ ಸಂದೇಶ ಕೂಡ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

ಬಿಗಿಪಟ್ಟು: 'ಕಳೆದ ಬಾರಿ ಕೇವಲ 278 ಮತಗಳ ಅಂತರದಲ್ಲಿ ತಾನು ಪರಾಭವಗೊಂಡಿದ್ದು, ಈ ಬಾರಿ ಶಿವಮೊಗ್ಗದಿಂದ ಸ್ಪರ್ಧಿಸಲು ತನಗೆ ಅವಕಾಶ ಮಾಡಿಕೊಡಬೇಕು. ಶಿವಮೊಗ್ಗ ಹೊರತುಪಡಿಸಿ ಬೇರ್ಯಾವ ಕ್ಷೇತ್ರದಿಂದಲೂ ತಾನು ಕಣಕ್ಕಿಳಿಯುವುದಿಲ್ಲ' ಎಂದು ಎಸ್.ರುದ್ರೇಗೌಡರವರು ಪಕ್ಷದ ವರಿಷ್ಠರ ಬಳಿ ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಎಸ್.ರುದ್ರೇಗೌಡರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬ ಮಹಾದಾಸೆ ಹೊಂದಿರುವ ಬಿ.ಎಸ್.ಯಡಿಯೂರಪ್ಪ ಕೂಡ ವರಿಷ್ಠರ ಬಳಿ ಅವರ ಪರ ನಡೆಸುತ್ತಿರುವ ವಕಾಲತ್ತು ಮುಂದುವರಿಸಿದ್ದಾರೆ. ಶಿವಮೊಗ್ಗ ಟಿಕೆಟ್‍ಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಟೀಂಗಳು ಪ್ರಬಲ ಪೈಪೋಟಿ ನಡೆಸುತ್ತಿರುವ ಹಿನ್ನೆಲೆಯಲ್ಲಿಯೇ, ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿಯನ್ನು ಸ್ವತಃ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ರಾಜ್ಯ ಘಟಕ ಮಧ್ಯಪ್ರವೇಶ ಮಾಡದಂತೆ ಸ್ಪಷ್ಟ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.

ಮಾ. 26 ರಂದು ಅಮಿತ್ ಶಾ ಶಿವಮೊಗ್ಗ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಂದು ರಾತ್ರಿ ಈಶ್ವರಪ್ಪ ಮನೆಯಲ್ಲಿ ಆಯೋಜಿಸಿರುವ ಔತಣ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಬಿ.ಎಸ್.ಯಡಿಯೂರಪ್ಪಗೂ ಔತಣ ಕೂಟಕ್ಕೆ ಆಹ್ವಾನ ನೀಡಲಾಗಿದೆ. ಅಲ್ಲಿಯೇ ಅಮಿತ್ ಶಾರವರು ಈ ಇಬ್ಬರು ಮುಖಂಡರ ಜೊತೆ ಮಾತುಕತೆ ನಡೆಸುವ ಸಾಧ್ಯತೆಯಿದ್ದು, ಶಿವಮೊಗ್ಗದಿಂದ ಕಣಕ್ಕಿಳಿಯುವ ಅಭ್ಯರ್ಥಿ ಯಾರೆಂಬ ವಿಚಾರವೂ ಸ್ಪಷ್ಟವಾಗುವ ಸಾಧ್ಯತೆಗಳಿವೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ಅಮಿತ್ ಶಾರವರು ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ನೀಡುತ್ತಿರುವ ಭೇಟಿಯೂ ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ನಾನಾ ರೀತಿಯ ಚರ್ಚೆಗಳಿಗೆ ಆಸ್ಪದವಾಗುವಂತೆ ಮಾಡಿದೆ.

ಒಟ್ಟಾರೆ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆಂಬ ವಿಷಯವು ಮತ್ತೆ ಗೊಂದಲದ ಗೂಡಾಗಿ ಪರಿವರ್ತಿತವಾಗುತ್ತಿದೆ. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಈಶ್ವರಪ್ಪ ಹಾಗೂ ರುದ್ರೇಗೌಡರವರು ನಗರದಾದ್ಯಂತ ಪೈಪೋಟಿಯ ಮೇಲೆ ಅಳವಡಿಸಿರುವ ಫ್ಲೆಕ್ಸ್ ಗಳ ಭರಾಟೆಯೇ ಇದಕ್ಕೆ ಸಾಕ್ಷಿಯಾಗಿವೆ ಎಂದರೆ ತಪ್ಪಾಗದು.

ಎಪಿಎಂಸಿ ಅಧ್ಯಕ್ಷರಿಂದಲೂ ಟಿಕೆಟ್ ಕೋರಿಕೆ!

ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‍ಗೆ ಕೆ.ಎಸ್.ಈಶ್ವರಪ್ಪ ಹಾಗೂ ಎಸ್.ರುದ್ರೇಗೌಡ ಪ್ರಬಲ ಪೈಪೋಟಿ ನಡೆಸುತ್ತಿರುವ ಬೆನ್ನಲ್ಲೆ ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಕೂಡ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಸ್.ಎಸ್.ಜ್ಯೋತಿಪ್ರಕಾಶ್‍ರವರು ತನಗೆ ಟಿಕೆಟ್ ನೀಡುವಂತೆ ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಮುಖಂಡರಿಗೆ ಇತ್ತೀಚೆಗೆ ಖುದ್ದು ಮನವಿ ಪತ್ರ ಅರ್ಪಿಸಿ ಬಂದಿದ್ದಾರೆ. ಹಾಗೆಯೇ ಟಿಕೆಟ್ ರೇಸ್‍ನಲ್ಲಿರುವ ಕೆ.ಎಸ್.ಈಶ್ವಪ್ಪರಿಗೂ ಕೂಡ ಈ ಬಾರಿ ತಮ್ಮ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಕೋರಿಕೊಳ್ಳುವ ಮೂಲಕ ಎಲ್ಲ ಗಮನ ಸೆಳೆಯುವಂತೆ ಮಾಡಿದ್ದಾರೆ.

ನಿಗೂಢವಾದ ಯಡಿಯೂರಪ್ಪ ನಡೆ: ಶಿವಮೊಗ್ಗ ನಗರದ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆ ಸಂಪೂರ್ಣ ನಿಗೂಢವಾಗಿ ಪರಿಣಮಿಸಿದೆ. ಪಕ್ಷದ ವೇದಿಕೆಯಲ್ಲಾಗಲಿ ಅಥವಾ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಾಗಲಿ ಅವರು ಯಾರ ಪರವಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಆದರೆ ಪಕ್ಷದ ವರಿಷ್ಠರ ಬಳಿ ಮಾತ್ರ ತಮ್ಮ ಬಲಗೈ ಬಂಟ ಎಸ್.ರುದ್ರೇಗೌಡಗೆ ಟಿಕೆಟ್ ನೀಡಬೇಕೆಂಬ ಸ್ಪಷ್ಟ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News