ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ದೇಶ- ಒಂದು ತೆರಿಗೆ ನೀತಿ ಜಾರಿ: ರಾಹುಲ್ ಗಾಂಧಿ ಭರವಸೆ

Update: 2018-03-24 13:59 GMT

ಮೈಸೂರು,ಮಾ.24: ಮುಂಬರುವ ಲೋಕಸಭಾ ಚುನಾಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯ ಮತ್ತು ಕೇಂದ್ರ ತೆರಿಗೆ ಎನ್ನುವುದು ಇರುವುದಿಲ್ಲ. ಒಂದು ದೇಶ ಒಂದು ತೆರಿಗೆ ನೀತಿ ಜಾರಿ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಶನಿವಾರ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾವು 2019 ರಲ್ಲಿ  ಅಧಿಕಾರಕ್ಕೆ ಬರುತ್ತೇವೆ. ಬಂದ ಮೇಲೆ ಒಂದೇ ಟ್ಯಾಕ್ಸ್ ಇರಲಿದ್ದು, ರಾಜ್ಯ ಮತ್ತು ಕೇಂದ್ರ ತೆರಿಗೆ ಅನ್ನೋದು ಇರುವುದಿಲ್ಲ. ಜಿ.ಎಸ್.ಟಿ ಅನ್ನೋದು ಗಬ್ಬರ್ ಸಿಂಗ್ ಟ್ಯಾಕ್ಸ್. ರಾಜ್ಯದಲ್ಲೂ ಕೇಂದ್ರ ಸರಕಾರದ ತೆರಿಗೆ ಹಾಕಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಒಂದು ದೇಶ ಒಂದು ತೆರಿಗೆ ನೀತಿಗೆ ಒತ್ತು ಕೊಡುತ್ತೇವೆ ಎಂದು ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದರು.

ನೋಟ್ ಅಮಾನ್ಯೀಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಮಾನ್ಯೀಕರಣ ಅನ್ನೋದು ದೇಶದ ಆರ್ಥಿಕತೆಗೆ ಬಿದ್ದ ದೊಡ್ಡ ಹೊಡೆತ. ಯಾವೊಬ್ಬ ಆರ್ಥಿಕ ತಜ್ಞಕೂಡ ಇದನ್ನು ಒಪ್ಪುವಂತದಲ್ಲ. ಭಾರತದ ಅರ್ಥಿಕತೆಯ ಮೇಲೆ ಇಂತಹ ಒಂದು ಪ್ರಯೋಗವಾಗಬಾರದಿತ್ತು. ಚಿದಂಬರಂ ಆಗಿರಬಹುದು, ಮನಮೋಹನ್ ಸಿಂಗ್ ಆಗಿರಬಹುದು, ಅಂತಹ ಆರ್ಥಿಕ ತಜ್ಞರೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 90ರಷ್ಟು ಕಪ್ಪುಹಣ ಇರೋದು ಸ್ವಿಸ್ ಬ್ಯಾಂಕ್, ರಿಯಲ್ ಎಸ್ಟೇಟ್ ಬಿಝಿನೆಸ್, ಗೋಲ್ಡ್ ಬಿಝಿನೆಸ್ ನಲ್ಲಿ. ಮೋದಿ ಕಪ್ಪುಹಣವನ್ನು ದೇಶಕ್ಕೆ ತರುತ್ತೇನೆ ಎಂದು ಅಧಿಕಾರಕ್ಕೆ ಬಂದರು. ಆದರೆ ತಂದಿದ್ದಾರಾ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಬಿಜೆಪಿ, ಆರೆಸ್ಸೆಸ್ ನದ್ದು ಒಂದು ದೇಶ, ಒಂದು ಐಡಿಯಾ. ಕಾಂಗ್ರೆಸ್ ನದ್ದು ಒಂದು ದೇಶ, ಹಲವು ಐಡಿಯಾ. ಇಲ್ಲಿ ಎಲ್ಲರಿಗೂ ಅವರದೇ ಚಿಂತನೆಗಳು ಇರುತ್ತವೆ. ಅದನ್ನು ನಾವು ಗೌರವಿಸುತ್ತೇವೆ. ಕರ್ನಾಟಕಕ್ಕೂ ಉತ್ತರ ಪ್ರದೇಶಕ್ಕೂ ದೊಡ್ಡ ಅಂತರ ಇದೆ. ಕರ್ನಾಟಕದಲ್ಲಿ ಯಾರ ಮೇಲೂ, ಯಾವುದನ್ನೂ ಹೇರಿಕೆ ಮಾಡಿಲ್ಲ. ಮೈಸೂರು ಬಹಳ ಒಳ್ಳೆಯ ನಗರ ಎಂದರು. 

ಬಿಜೆಪಿಯವರು ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಎಲ್ಲರನ್ನೂ ಒಂದು ಮಾಡುವ ಕೆಲಸವನ್ನು ಮಾಡುತ್ತಿದೆ. ಎಲ್ಲರಿಗೂ ಮಾತನಾಡುವ ಅಧಿಕಾರ ನೀಡಿದೆ. ಬಡವರ, ಧನಿ ಇಲ್ಲದವರ ಪರವಾಗಿದೆ. ಹೀಗಾಗಿ ಜನರು ಕಾಂಗ್ರೆಸ್ ಪಕ್ಷದೊಂದಿಗೆ ಇರಬಹುದು. ನಾವು ಅಧಿಕಾರಕ್ಕೆ ಬಂದರೆ ಲೋಕಪಾಲ್ ನೂರಕ್ಕೆ ನೂರರಷ್ಟು ಜಾರಿಯಾಗುತ್ತದೆ. ಈಗಾಗಲೇ ನಾವು ಪಾರ್ಲಿಮೆಂಟ್‍ನಲ್ಲಿ ಲೋಕಪಾಲ್ ಪಾಸ್ ಮಾಡಿದ್ದೆವು. ಆದರೆ ಈಗಿನ ಸರಕಾರ ಜಾರಿಗೆ ತರಲಿಲ್ಲ ಎಂದು ರಾಹುಲ್ ಹೇಳಿದರು.

ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಯರಿಗೆ ಕೇವಲ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳ ಬೇಕು ಎಂದು ಉಪನ್ಯಾಸಕರು ತಿಳಿಸಿದರು. ಆಗ ಮಧ್ಯ ಪ್ರವೇಶಿಸಿದ ರಾಹುಲ್, ಅವರು ಕನ್ನಡದಲ್ಲೇ ಪ್ರಶ್ನೆ ಕೇಳಲಿ, ಇಂಗ್ಲೀಷ್ ನಲ್ಲಿ ತರ್ಜುಮೆ ಮಾಡಿಸಿ ಕೊಳ್ಳುತ್ತೇನೆ ಎನ್ನುವ ಮೂಲಕ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಯನ್ನು ಬೆಂಬಲಿಸಿದರು. ರಾಹುಲ್‍ಗೆ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಗೆ ಕನ್ನಡ ಪ್ರಶ್ನೆಗೆ ಉತ್ತರಿಸಲು ರಾಹುಲ್ ಪರಮೇಶ್ವರ್ ಸಹಾಯ ಪಡೆದರು. 

ನಂತರ ಪ್ರಶ್ನೆ ಕರ್ನಾಟಕಕ್ಕೆ ಸೇರಿದ್ದು ಎಂದಾಗ ನೀವು ಸಿಎಂರನ್ನು ಕೇಳಿ ಎಂದು ರಾಹುಲ್ ಉತ್ತರಿಸಿದರು. 'ಲ್ಯಾಪ್ ಟಾಪ್ ವಿತರಣೆಯಲ್ಲಿ ಯಾಕೆ ತಾರತಮ್ಯ ಮಾಡಲಾಗುತ್ತಿದೆ' ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ 'ಇನ್ನು ಒಂದು ತಿಂಗಳಲ್ಲಿ ಪಿಯು ಪಾಸಾದ ಎಲ್ಲರಿಗೂ ಲ್ಯಾಪ್ ಟಾಪ್ ವಿತರಿಸುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಮಾಜದಲ್ಲಿ ಯಾರು ದುರ್ಬಲರಾಗಿರುತ್ತಾರೋ ಅವರಿಗೆ ಸಹಾಯ ಮಾಡಿ. ಎಲ್ಲರಲ್ಲೂ ಸಮಾನತೆ ತರಬೇಕು ಎಂದು ಹೇಳಿದರು.

ಸುಮಾರು ಒಂದು ಗಂಟೆಗಳ ಕಾಲ ಸಂವಾದ ನಡೆಸಿದರು. ಸಂವಾದದ ನಂತರ ರಾಹುಲ್ ಗಾಂಧಿಯವರೊಂದಿಗೆ ವಿದ್ಯಾರ್ಥಿನಿಯರು ಸೆಲ್ಫಿ ತೆಗೆಸಿಕೊಂಡರು. ಕಲಾ ಕಾಲೇಜಿನ 400 ಮತ್ತು ವಾಣಿಜ್ಯ ಕಾಲೇಜಿನ 300 ವಿದ್ಯಾರ್ಥಿನಿಯರು ಸಂವಾದಲ್ಲಿ ಪಾಲ್ಗೊಂಡಿದ್ದರು.  

ಸಂವಾದ ನಡೆಯುತ್ತಿದ್ದ ವೇಳೆ ಎದ್ದು ನಿಂತ ವಿದ್ಯಾರ್ಥಿನಿಯೊಬ್ಬಳು 'ರಾಹುಲ್ ನಾನು ನಿಮ್ಮ ಜೊತೆಗೆ ಫೋಟೋ ಕ್ಲಿಕ್ಕಿಸಬೇಕು. ಅವಕಾಶ ನೀಡಿ ಪ್ಲೀಸ್' ಎಂದು ಹೇಳಿದಳು. ತಕ್ಷಣ ಭದ್ರತೆಯನ್ನು ಲೆಕ್ಕಿಸದೇ ವೇದಿಕೆಯಿಂದ ಕೆಳಗೆ ಇಳಿದು ಬಂದ ರಾಹುಲ್ ಗಾಂಧಿ ವಿದ್ಯಾರ್ಥಿನಿಯೊಂದಿಗೆ ಸೆಲ್ಫಿ ತೆಗೆಸಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News