ಗುಜರಾತ್ ಗಲಭೆಗೆ ಸಂಬಂಧಿಸಿದ ಪಠ್ಯದಿಂದ ‘ಮುಸ್ಲಿಂ ವಿರೋಧಿ’ ಉಲ್ಲೇಖ ಕೈಬಿಟ್ಟ ಎನ್‌ಸಿಇಆರ್‌ಟಿ!

Update: 2018-03-24 13:59 GMT

ಹೊಸದಿಲ್ಲಿ,ಮಾ.24: ಎನ್‌ಸಿಇಆರ್‌ಟಿಯ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿಯ ಗುಜರಾತ್ ಗಲಭೆಗಳಿಗೆ ಸಂಬಂಧಿಸಿದ ಅಧ್ಯಾಯದಿಂದ ‘ಮುಸ್ಲಿಂ ವಿರೋಧಿ’ ಉಲ್ಲೇಖವನ್ನು ತೆಗೆದುಹಾಕಲಾಗಿದ್ದು, ಈ ನಿರ್ಧಾರವು ರಾಜಕೀಯ ವಿವಾದವನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಮಾರುಕಟ್ಟೆಗೆ ಇತ್ತೀಚಿಗೆ ಬಿಡುಗಡೆಗೊಳಿಸಲಾಗಿರುವ ಹೊಸ ಪರಿಷ್ಕೃತ ಪುಸ್ತಕದಲ್ಲಿಯ ‘ಸ್ವಾತಂತ್ರ್ಯಾನಂತರ ಭಾರತದಲ್ಲಿ ರಾಜಕೀಯ’ ಎಂಬ ಶೀರ್ಷಿಕೆಯ ಅಧ್ಯಾಯದಿಂದ 2002ರ ಗುಜರಾತ್ ದಂಗೆ ಸಂದರ್ಭದಲ್ಲಿನ ಉಪಶೀರ್ಷಿಕೆಯಿಂದ ‘ಮುಸ್ಲಿಂ ವಿರೋಧಿ’ ಉಲ್ಲೇಖವನ್ನು ಮತ್ತು ಅಧ್ಯಾಯದ ಮೊದಲನೇ ಸಾಲಿನಿಂದ ‘ಮುಸ್ಲಿಂ’ ಶಬ್ದವನ್ನು ತೆಗೆಯಲಾಗಿದೆ. ಪುಸ್ತಕದ ಉಳಿದ ಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಅದು ದಂಗೆಗಳನ್ನು ನಿಯಂತ್ರಿಸುವಲ್ಲಿ ವೈಫಲ್ಯಕ್ಕಾಗಿ ಆಗಿನ ಸರಕಾರದ ಕುರಿತು ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಒಳಗೊಂಡಿದೆ. ಇವೆಲ್ಲ ಸಣ್ಣಪುಟ್ಟ ಬದಲಾವಣೆಗಳು ಎಂದು ಎನ್‌ಸಿಇಆರ್‌ಟಿ ಹೇಳಿದೆ. ಇದು ಯುಪಿಎ ಸರಕಾರವು ಅಧಿಕಾರದಲ್ಲಿದ್ದ 2007ರಿಂದ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಮೊದಲ ಪರಿಷ್ಕರಣೆ ಯಾಗಿದೆ.

ಅಧಿಕೃತ ಅಂಕಿಅಂಶಗಳಂತೆ 2002ರ ಗೋಧ್ರೋತ್ತರ ದಂಗೆಗಳಲ್ಲಿ 790 ಮುಸ್ಲಿಮರು ಮತ್ತು 254 ಹಿಂದುಗಳು ಬಲಿಯಾಗಿದ್ದು, ಈ ದಂಗೆಗಳು ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದ್ದವು.

ಕಳೆದ ವರ್ಷ ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಅಧಿಕಾರಿಗಳು ಉಪಸ್ಥಿತರಿದ್ದ ಪುನರ್‌ಪರಿಶೀಲನಾ ಸಮಿತಿಯ ಸಭೆಯಲ್ಲಿ ಪಠ್ಯಪುಸ್ತಕವನ್ನು ತಿದ್ದುಪಡಿಗೊಳಿಸುವ ನಿರ್ಧಾರ ವನ್ನು ಕೈಗೊಳ್ಳಲಾಗಿತ್ತು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News