ಬಿಜೆಪಿ ಅಧಿಕಾರಕ್ಕೆ ಬಂದರೆ ಗಲ್ಲಿ ಗಲ್ಲಿಯಲ್ಲೂ ಹಿಂದೂ ಸಮಾಜೋತ್ಸವಕ್ಕೆ ಅವಕಾಶ: ಸಿ.ಟಿ.ರವಿ

Update: 2018-03-24 14:18 GMT

ಚಿಕ್ಕಮಗಳೂರು, ಮಾ.24: ಹಿಂದೂ ವಿರೋಧಿ ಸರಕಾರವನ್ನು ಕಿತ್ತೊಗೆದು ಬಿಜೆಪಿಗೆ ಅವಕಾಶ ನೀಡಿದರೆ ಗಲ್ಲಿ ಗಲ್ಲಿಯಲ್ಲೂ ಹಿಂದೂ ಸಮಾಜೋತ್ಸವ ನಡೆಸಲು ಅವಕಾಶ ನೀಡುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಮಾ.27ರಂದು ನಡೆಯುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ನಿಷೇದಾಜ್ಞೆ ಕುರಿತ ಪ್ರಶ್ನೆಗೆ ಉತ್ತರಿಸಿದರು. 'ಹಿಂದೂ ಸಮಾಜದಲ್ಲಿ ಹಿಂದೂ ಸಮಾಜೋತ್ಸವಕ್ಕೆ ನಿಷೇದಾಜ್ಞೆ ಹಾಕಿರುವುದು ರಾಜ್ಯದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಸರಕಾರ ಎನ್ನುವುದಕ್ಕೆ ಸಾಕ್ಷಿ. ಪಾಕಿಸ್ತಾನದಲ್ಲಿ ಹಿಂದೂ ಸಮಾಜೋತ್ಸವ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ದೇಶದ್ರೋಹದ ಚಟುವಟಿಕೆಗಳಿಗೆ ಬೆಂಬಲ ನೀಡುವ ಸಂಘಟನೆಗಳಿಗೆ ಹಾಗೂ ತಾಲಿಬಾನ್ ಸಂಘಟನೆಗಳಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರಕಾರದ ಅವಕಾಶ ನೀಡುತ್ತದೆ. ಮುಂದಿನ ಚುನಾವಣೆಯಲ್ಲಿ ಹಿಂದೂ ವಿರೋಧಿ ಸರಕಾರವನ್ನು ಕಿತ್ತೊಗೆದು ಬಿಜೆಪಿಗೆ ಅವಕಾಶ ನೀಡಿದರೆ ಗಲ್ಲಿ ಗಲ್ಲಿಯಲ್ಲೂ ಹಿಂದೂ ಸಮಾಜೋತ್ಸವ ನಡೆಸಲು ಅವಕಾಶ ನೀಡುತ್ತೇವೆ ಎಂದು ಹೇಳಿದರು.

ಸುಧೀರ್ಘ ರಾಜಕಾರಣದ ಅನುಭವ ಇರುವವರು, ಮಂತ್ರಿಗಳಾಗಿದ್ದವರೇ ಮತ ಹಾಕುವಾಗ ಎಚ್ಚರ ತಪ್ಪಿದರೆ ಹೇಗೆ? ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಎರಡೆರೆಡು ಬಾರಿ ಮತಪತ್ರ ಕೊಡಲು ಅವಕಾಶವಿಲ್ಲ. ಚುನಾವಣಾ ಅಧಿಕಾರಿಗಳು ಅದನ್ನು ತೀರಸ್ಕರಿಸಿದ್ದಾರೆ. ಚುನಾವಣೆ ಎಂದ ಮೇಲೆ ಚುನಾವಣೆಯೇ. 50 ವರ್ಷಗಳ ಸುಧೀರ್ಘ ಅನುಭವವಿರುವವರು ಹಾಗೂ ಮಂತ್ರಿಗಳಾಗಿದ್ದವರ ಮತಗಳೇ ಕುಲಗೆಟ್ಟು ಹೋದರೆ ಅದಕ್ಕೆ ಬೇರೆಯೇ ಅರ್ಥವಿರುತ್ತದೆ. ಚುನಾವಣೆಯಲ್ಲಿ ಇದ್ದದ್ದೇ ಐದು ಜನ ಅಭ್ಯರ್ಥಿಗಳು. ತಮ್ಮ ಪಕ್ಷದವರು ಯಾರು ಎಂದು ಗುರುತಿಸಿ ಮತ ಹಾಕುವಲ್ಲಿ ಎಚ್ಚರ ವಹಿಸದಿರುವುದು ಜನಪ್ರತಿನಿಧಿಗಳಿಗೆ ಗೌರವ ತರುವ ಸಂಗತಿಯಲ್ಲ ಎಂದು ಹೇಳಿದರು. 

ರಾಜ್ಯ ಸರಕಾರದ ಸಮಾಜ ಒಡೆಯುವ ನೀತಿಯ ಬಗ್ಗೆ ಕಾಂಗ್ರೆಸ್ ಶಾಸಕರೇ ಬೇಸರಗೊಂಡಿದ್ದಾರೆ. ಸಮಾಜ ಒಡೆಯುವ ನೀತಿ ಚುನಾವಣೆ ಫಲಿತಾಂಶಕ್ಕೆ ಮಾರಕ ಆಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ. ಬ್ರಿಟಿಷರನ್ನು ಮೀರಿ ಹಿಂದೂ ಸಮಾಜ ದುರ್ಬಲಗೊಳಿಸುವ, ಜಾತಿ ಜಾತಿ ಒಡೆಯುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಇದನ್ನು ಸಮಾಜ ಒಪ್ಪುವುದಿಲ್ಲ ಎಂದ ಅವರು, ಈ ನಾಡಿನ ಐಕ್ಯತೆಗಾಗಿ ನಾಡನ್ನು ಒಡೆಯುವ ಕೆಲಸವನ್ನು ಜನರು ಒಪ್ಪುವುದಿಲ್ಲ. ಸಮಾಜ ಒಡೆಯುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ವಿದ್ಯಾರಣ್ಯರ ಪ್ರೇರಣೆಯಿಂದ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದು, ರಾಜ್ಯದ ಐಕ್ಯತೆ, ಸಾಮಾಜಿಕ, ಆರ್ಥಿಕ ಪುನರುತ್ಥಾನವಾಗಬೇಕೆಂದಾಗಿದೆ. ಇಂತಹ ರಾಜ್ಯದಲ್ಲಿ ಕಾಂಗ್ರೆಸ್ ವಿಭಜನೆಯೇ ಮೂಲಮಂತ್ರ ಮಾಡಿಕೊಂಡಿರುವುದು ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News