ಟಾಟಾ ಬಿರ್ಲಾ, ಅಮಿತ್ ಶಾ ಮಗನಿಗೆ ಮೋದಿಯ ಅಚ್ಛೇದಿನ್: ಸಿದ್ದರಾಮಯ್ಯ ವ್ಯಂಗ್ಯ

Update: 2018-03-24 15:53 GMT

ಚಾಮರಾಜನಗರ,ಮಾ.24: ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದಾಗ ದೇಶಕ್ಕೆ ಅಚ್ಛೇದಿನ್ ಆಯೇಗಾ ಅಂತ ಹೇಳಿದರು. ಆದರೆ ಅಚ್ಛೇದಿನ್ ಕೇವಲ ಟಾಟಾ ಬಿರ್ಲಾ, ಅಮಿತ್ ಶಾ ಮಗ, ಸೇರಿದಂತೆ ಬಂಡವಾಳ ಕಂಪೆನಿಗಳಿಗೆ ಬಂತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಜನಾಶಿರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೇತೃತ್ವ ವಹಿಸಿಕೊಂಡಿರುವ ಪ್ರಧಾನ ಮಂತ್ರಿ ಮೋದಿಯವರು ಕರ್ನಾಟಕಕ್ಕೆ ಹೆಚ್ಚಾಗಿ ಬರುತ್ತಿದ್ದಾರೆ. ಬಂದಾಗಲೆಲ್ಲಾ ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ ಎಂದು ಹೇಳುತ್ತಾರೆ. ಆದರೆ ಅವರ ಪಕ್ಕದಲ್ಲಿ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿರುವ ಯಡಿಯೂರಪ್ಪ ಮತ್ತು ಕೆಲವು ಬಿಜೆಪಿ ಮುಖಂಡರು ಇದ್ದಾರೆ. ಆ ಬಗ್ಗೆ ಅವರು ಮಾತನಾಡುವುದಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಬರಲೇ ಇಲ್ಲ. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಅನ್ನೋ ಭಯದಲ್ಲಿ ಇದ್ದರು. ಇಲ್ಲಿಗೆ ಬಂದಿದ್ದರೆ ಅವರು ಜೈಲಿಗೆ ಹೋಗುತ್ತಿರಲಿಲ್ಲವೇನೋ ಎಂದು ಅನಿಸುತ್ತದೆ. ಆದರೆ ನಾನು ಚಾಮರಾಜನಗರಕ್ಕೆ 9 ಬಾರಿ ಬಂದಿದ್ದೇನೆ. ಅದಕ್ಕೆ ನಾನು ಐದು ವರ್ಷ ಮುಖ್ಯಮಂತ್ರಿ ಕುರ್ಚಿಯಲ್ಲಿ ಗಟ್ಟಿಯಾಗಿ ಕುಳಿತಿದ್ದೇನೆ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ದ  ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಾರೆ. ಯಾರು ಭ್ರಷ್ಟರು ನರೇಂದ್ರ ಮೋದಿಯವರೇ? ನಿಮ್ಮ ಪಕ್ಕದಲ್ಲಿರುವ ಯಡಿಯೂರಪ್ಪ ಜೈಲಿಗೆ ಹೋದವರು, ಅವರ ನೇತೃತ್ವದ ಸರ್ಕಾರದಲ್ಲಿದ್ದ ನಾಲ್ವರು ಸಚಿವರು ಹಗರಣಗಳನ್ನು ಮಾಡಿ ಜೈಲಿಗೆ ಹೋದವರು. ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಮಾತನಾಡುತ್ತೀರಲ್ಲ. ಇದು ಸರಿಯೇ ಎಂದು ಪ್ರಶ್ನೆ ಮಾಡಿದರು.

ದೇಶದಲ್ಲಿ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ ಎಂದು ನರೇಂದ್ರ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ಕೇಳಿಕೊಂಡೆ. ಆದರೆ ಅವರು ಏನೂ ಮಾಡಲಿಲ್ಲ. ಕರ್ನಾಟಕ ಸರ್ಕಾರವು ತಾವು ಹೇಳಿದ 10 ದಿನದಲ್ಲಿ ಸಹಕಾರ ಬ್ಯಾಂಕ್‍ನಲ್ಲಿ ಸಾಲ ಪಡೆದಿರುವ ರೈತರ ಸಾಲದಲ್ಲಿ 50 ಸಾವಿರ ರೂಪಾಯಿಗಳನ್ನು ಮನ್ನಾ ಮಾಡಿದರು. ಇದು ರೈತರ ಪರವಾಗಿರುವ ಸರ್ಕಾರ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಮಾಜಿ ರಾಜ್ಯಪಾಲ ಬಿ.ರಾಚಯ್ಯರವರ ಪುತ್ರ ಎ.ಆರ್. ಕೃಷ್ಣಮೂರ್ತಿರವರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೇಂದ್ರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವೆ ಗೀತಾಮಹದೇವಪ್ರಸಾದ್, ಸಂಸದ ಆರ್.ದೃವನಾರಾಯಣ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಯಣ್ಣ, ನರೇಂದ್ರ, ಧರ್ಮಸೇನಾ ಸೇರಿದಂತೆ ಹಲವಾರು ಗಣ್ಯರು ಇದ್ದರು.

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಜನಾಶಿರ್ವಾದ ಯಾತ್ರೆ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿರವರು ಮುಖ್ಯಮಂತ್ರಿ ಸಿದ್ದರಾಮಯ್ಯರವರೊಂದಿಗೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಮೈಸೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದರು. ವೇದಿಕೆಗೆ ರಾಹುಲ್ ಗಾಂಧಿ ಆಗಮಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲರೂ ರಾಹುಲ್‍ಗಾಂಧಿಗೆ ಜಯಘೋಷಣೆ ಕೂಗಿದರು. ಎಲ್ಲಾ ಕಡೆಯಲ್ಲೂ ಕಾಂಗ್ರೆಸ್ ಬಾವುಟ, ಕಾರ್ಯಕರ್ತರಲ್ಲಿ ಉತ್ಸುಕತೆ ಕಾಣುತ್ತಿತ್ತು.

ನಂತರ ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಊಟ ಮಾಡಿದ ರಾಹುಲ್‍ಗಾಂಧಿ ಬಸ್‍ನಲ್ಲೇ ರೋಡ್ ಶೋ ಮೂಲಕ ಸಂತೇಮರಹಳ್ಳಿ ಮಾರ್ಗವಾಗಿ ಯಳಂದೂರು, ಕೊಳ್ಳೇಗಾಲ, ಸತ್ತೇಗಾಲ ಮಾರ್ಗವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ಕಡೆಗೆ ಪ್ರಯಾಣ ಬೆಳಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News