ಆಧಾರ್ ಭದ್ರತಾ ಲೋಪ: ಪ್ರತಿ ಭಾರತೀಯನ ಖಾಸಗಿ ಮಾಹಿತಿ ಅಪಾಯದಲ್ಲಿ!

Update: 2018-03-24 15:47 GMT

ಹೊಸದಿಲ್ಲಿ, ಮಾ.24: ದೇಶದ ಪ್ರತಿಯೊಬ್ಬ ನಾಗರಿಕನ ಬೆರಳ ಗುರುತು ಸೇರಿದಂತೆ ಹಲವು ಖಾಸಗಿ ಮಾಹಿತಿಯನ್ನು ಒಳಗೊಂಡಿರುವ ಆಧಾರ್ ಅನ್ನು ಸರಕಾರವು ಬ್ಯಾಂಕ್ ಖಾತೆಯಿಂದ ಹಿಡಿದು ಮೊಬೈಲ್ ಸಂಖ್ಯೆಯವರೆಗೆ ಎಲ್ಲದಕ್ಕೂ ಜೋಡಿಸಲು ಒತ್ತಾಯ ಮಾಡುತ್ತಿದೆ. ಆದರೆ ಈ ರೀತಿ ಮಾಡುವುದರಿಂದ, ಒಂದು ವೇಳೆ ಆಧಾರ್ ಮಾಹಿತಿ ಸೋರಿಕೆಯಾದರೆ ಜನರ ಖಾಸಗಿ ಮಾಹಿತಿಗಳು ಇತರರ ಪಾಲಾಗುವ ಅಪಾಯವಿದೆ ಎಂದು ಭದ್ರತಾ ಸಂಶೋಧಕರೊಬ್ಬರು ಎಚ್ಚರಿಸಿದ್ದಾರೆ.

ಝೀರೊ ಡೇಯ ಭದ್ರತಾ ಸಂಶೋಧಕ ಝ್ಯಾಕ್ ವಿಟಕರ್ (ಝಡ್‌ಡಿ ನೆಟ್) ನ ವರದಿಯ ಪ್ರಕಾರ, ಆಧಾರ್ ಹೊಂದಿರುವ ಪ್ರತಿಯೊಬ್ಬ ಭಾರತೀಯನ ಖಾಸಗಿ ಮಾಹಿತಿ ಸೋರಿಕೆಯಾಗಿದೆ. ಝ್ಯಾಕ್ ಪ್ರಕಾರ, ರಾಷ್ಟ್ರೀಯ ವಿಶಿಷ್ಟ ಗುರುತಿನ ಚೀಟಿಯು ಮತ್ತೊಂದು ದೊಡ್ಡ ಮಟ್ಟದ ಭದ್ರತಾ ಲೋಪವನ್ನು ಎದುರಿಸುತ್ತಿದೆ. ಅಮೆಝಾನ್ ಮತ್ತು ಉಬರ್‌ನಂಥ ಕಂಪೆನಿಗಳು ಕೂಡಾ ತಮ್ಮ ಗ್ರಾಹಕರನ್ನು ಗುರುತಿಸಲು ಸುಲಭವಾಗಿ ಆಧಾರ್ ದತ್ತಾಂಶವನ್ನು ಪಡೆಯಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜನವರಿಯಲ್ಲಿ ದಿ ಟ್ರಿಬ್ಯೂನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಆಧಾರ್ ವ್ಯವಸ್ಥೆಯಲ್ಲಿ ಗುರುತರ ಭದ್ರತಾ ಲೋಪವೊಂದು ನಡೆದಿದ್ದು ಇದರಿಂದಾಗಿ ಕೇವಲ 10 ನಿಮಿಷಗಳಲ್ಲಿ 500 ರೂ. ಗೆ ಲಕ್ಷಗಳಷ್ಟು ಆಧಾರ್ ಮಾಹಿತಿಯನ್ನು ನೀಡಬಹುದಾಗಿದೆ ಎಂದು ಎಚ್ಚರಿಸಲಾಗಿತ್ತು. ಅದೇ ತಿಂಗಳಲ್ಲಿ ವಾಶಿಂಗ್ಟನ್ ಪೋಸ್ಟ್ ಪತ್ರಿಕೆ ಕೂಡಾ ಇದೇ ರೀತಿಯ ವರದಿ ಪ್ರಕಟಿಸಿದ್ದು, ಆಧಾರ್ ವ್ಯವಸ್ಥೆಯಲ್ಲಿ ಉಂಟಾಗಿರುವ ಭದ್ರತಾ ಲೋಪದಿಂದ ಲಕ್ಷಾಂತರ ಜನರು ತಮ್ಮ ಖಾಸಗಿತನವನ್ನು ಕದಿಯಲ್ಪಡುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಲಾಗಿತ್ತು.

ಆದರೆ, ಆಧಾರ್ ದತ್ತಾಂಶ ವ್ಯವಸ್ಥೆಯಲ್ಲಿರುವ ದೋಷವು ಈಗಲೂ ಪ್ರತಿ ಆಧಾರ್ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಝಡ್‌ಡಿನೆಟ್‌ಗೆ ಭದ್ರತಾ ಸಂಶೋಧಕರು ದೃಢಪಡಿಸಿದ್ದಾರೆ. ಸರಕಾರಿ ಸ್ವಾಮ್ಯದ ಸಂಸ್ಥೆಯು ನಿಭಾಯಿಸುತ್ತಿರುವ ವ್ಯವಸ್ಥೆಯಲ್ಲಿ ಉಂಟಾಗಿರುವ ದತ್ತಾಂಶ ಸೋರಿಕೆಯಿಂದಾಗಿ ಯಾರು ಬೇಕಾದರೂ ಆಧಾರ್ ಹೊಂದಿರುವ ಎಲ್ಲ ವ್ಯಕ್ತಿಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಉದಾಹರಣೆಗೆ, ಅವರ ಹೆಸರು, ವಿಶಿಷ್ಟ ಗುರುತಿನ ಸಂಖ್ಯೆ, ಬ್ಯಾಂಕ್ ಮಾಹಿತಿ ಸೇರಿದಂತೆ ಆ ಸಂಖ್ಯೆ ಜೊತೆ ಜೋಡಿಸಲಾಗಿರುವ ಇತರ ಸೇವೆಗಳು ಹಾಗೂ ಇತರ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ವರದಿ ತಿಳಿಸಿದೆ. ಆಧಾರ್ ವ್ಯವಸ್ಥೆಯಲ್ಲಿ ಇರುವ ದೋಷವನ್ನು ಪತ್ತೆ ಮಾಡಿರುವ ಹೊಸದಿಲ್ಲಿ ಮೂಲದ ಭದ್ರತಾ ಸಂಶೋಧಕ ಕರಣ್ ಸೈನಿ, ಈ ದೋಷದಿಂದಾಗಿ ಆಧಾರ್ ಹೊಂದಿರುವ ಪ್ರತಿಯೊಬ್ಬ ಕೂಡಾ ಭಾದಿತನಾಗಿದ್ದಾನೆ ಎಂದು ಝಡ್‌ಡಿ ನೆಟ್‌ಗೆ ತಿಳಿಸಿದ್ದಾರೆ. ಈ ದೋಷವು ಪತ್ತೆಯಾದ ದಿನದಿಂದಲೂ ಹಲವು ಬಾರಿ ಇಮೇಲ್ ಮೂಲಕ ಈ ಬಗ್ಗೆ ಎಚ್ಚರಿಸಿದ್ದರೂ ಸರಕಾರವು ನಮ್ಮ ಮೇಲ್‌ಗೆ ಸ್ಪಂದಿಸಿಲ್ಲ ಮತ್ತು ಈ ದೋಷವನ್ನು ಸರಿಪಡಿಸಲು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಝಡ್‌ಡಿನೆಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News