‘ಕೇಂಬ್ರಿಜ್ ಅನಾಲಿಟಿಕಾ’ಗೆ 5,700 ಕೋಟಿ ಗೆಳೆತನಗಳ ಮಾಹಿತಿ ನೀಡಿದ್ದ ಫೇಸ್‌ಬುಕ್!

Update: 2018-03-24 16:39 GMT

ಲಂಡನ್, ಮಾ. 24: 2011ರಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬೆಸೆದುಕೊಂಡ 5,700 ಕೋಟಿ ಗೆಳೆತನಗಳ ಕುರಿತ ಮಾಹಿತಿಗಳನ್ನು ‘ಕೇಂಬ್ರಿಜ್ ಅನಾಲಿಟಿಕಾ’ ಹಗರಣದ ನಡುವಿನಲ್ಲಿರುವ ಸಂಶೋಧಕ ಅಲೆಕ್ಸಾಂಡರ್ ಕೊಗನ್‌ಗೆ ಫೇಸ್‌ಬುಕ್ ಒದಗಿಸಿದೆ.

ಮಾಹಿತಿ ಸಂಪಾದನೆ ಹಗರಣಕ್ಕೆ ಸಂಬಂಧಿಸಿ ಕೊಗನ್‌ರನ್ನು ಇತ್ತೀಚೆಗೆ ಫೇಸ್‌ಬುಕ್ ಅಮಾನತುಗೊಳಿಸಿದೆ.

ಪ್ರಪಂಚದಲ್ಲಿರುವ ಪ್ರತಿಯೊಂದು ದೇಶದಲ್ಲಿ 2011ರಲ್ಲಿ ಹುಟ್ಟಿಕೊಂಡ ಪ್ರತಿಯೊಂದು ಗೆಳೆತನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಫೇಸ್‌ಬುಕ್, ಕೊಗನ್‌ರ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಪ್ರಯೋಗಾಲಯಕ್ಕೆ ಒದಗಿಸಿತ್ತು. ಅಂತಾರಾಷ್ಟ್ರೀಯ ಗೆಳೆತನಗಳ ಕುರಿತ ಅಧ್ಯಯನಕ್ಕಾಗಿ ಈ ಮಾಹಿತಿಗಳನ್ನು ಬಳಸಲಾಗಿತ್ತು.

ಅಧ್ಯಯನವು ‘ಪರ್ಸನಾಲಿಟಿ ಆ್ಯಂಡ್ ಇಂಡಿವೀಜುವಲ್ ಡಿಫರೆನ್ಸಸ್’ನಲ್ಲಿ 2015ರಲ್ಲಿ ಪ್ರಕಟವಾಗಿದೆ ಎಂದು ‘ದ ಗಾರ್ಡಿಯನ್’ ಶುಕ್ರವಾರ ವರದಿ ಮಾಡಿದೆ.

ಸಂಖ್ಯೆಗಳು ಮಾತ್ರ, ವೈಯಕ್ತಿಕ ಮಾಹಿತಿಯಿಲ್ಲ: ಫೇಸ್‌ಬುಕ್

ಆದರೆ, ಅಲೆಕ್ಸಾಂಡರ್ ಕೊಗನ್‌ಗೆ ಒದಗಿಸಲಾಗಿರುವ ಮಾಹಿತಿಗೆ ಹೆಚ್ಚಿನ ಮಹತ್ವವಿಲ್ಲ ಎಂದು ಫೇಸ್‌ಬುಕ್ ಹೇಳಿದೆ.

‘‘ಹೊರಗೆ ಕೊಡಲಾಗಿರುವ ಮಾಹಿತಿ ಅಂಕಿ-ಸಂಖ್ಯೆಗಳು ಮಾತ್ರ. ವಿವಿಧ ದೇಶಗಳ ನಡುವೆ ಎಷ್ಟು ಗೆಳೆತನಗಳು ಆಗಿವೆ ಎಂಬ ಕುರಿತ ಸಂಖ್ಯೆಗಳು ಮಾತ್ರ. ಉದಾಹರಣೆಗೆ; ಅಮೆರಿಕ ಮತ್ತು ಬ್ರಿಟನ್‌ಗಳ ನಡುವೆ ಇಷ್ಟು ಸಂಖ್ಯೆಯ ಗೆಳೆತನಗಳು ಆಗಿವೆ. ಈ ಮಾಹಿತಿಗಳಲ್ಲಿ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಗಳಿಲ್ಲ’’ ಎಂದು ಫೇಸ್‌ಬುಕ್ ವಕ್ತಾರೆ ಕ್ರಿಸ್ಟೀನ್ ಚೆನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News