ಲಾಲೂ ಪ್ರಸಾದ್‌ಗೆ ಜೀವಬೆದರಿಕೆಯಿದೆ : ತೇಜಸ್ವಿ ಯಾದವ್

Update: 2018-03-24 16:52 GMT

ರಾಂಚಿ, ಮಾ.24: ಮೇವುಹಗರಣದ ನಾಲ್ಕನೇ ಪ್ರಕರಣದಲ್ಲಿ ಎರಡು ಅಪರಾಧಕ್ಕೆ ತಲಾ 7 ವರ್ಷ ( ಒಟ್ಟು 14 ವರ್ಷ) ಜೈಲುಶಿಕ್ಷೆಗೆ ಗುರಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರಿಗೆ ಜೀವಬೆದರಿಕೆಯಿದೆ ಎಂದು ಲಾಲೂಪ್ರಸಾದ್ ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ.

 ಈ ಪ್ರಕರಣದಲ್ಲಿ ಲಾಲೂಪ್ರಸಾದ್‌ಗೆ 60 ಲಕ್ಷ ರೂ. ದಂಡ ಕೂಡಾ ವಿಧಿಸಲಾಗಿದೆ. ಆದರೆ ತನ್ನ ತಂದೆ ನಿರ್ದೋಷಿಯಾಗಿದ್ದು ಅವರನ್ನು ರಾಜಕೀಯವಾಗಿ ಮುಗಿಸಿಬಿಡಲು ಪಿತೂರಿ ನಡೆಯುತ್ತಿದೆ. ಆದ್ದರಿಂದ ಅವರಿಗೆ ಜೀವಬೆದರಿಕೆಯಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಲಾಲೂಪ್ರಸಾದ್‌ರ ಬಗ್ಗೆ ಭಯವಿದೆ. ಲಾಲೂ ಹೊರಬರುವುದನ್ನು ಅವರು ಬಯಸುವುದಿಲ್ಲ. ಯಾಕೆಂದರೆ ಲಾಲೂಪ್ರಸಾದ್ ಜೈಲಿನಿಂದ ಹೊರಬಂದರೆ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ವರ್ಷದ ಅಧಿಕಾರದ ಕನಸು ನನಸಾಗದು ಎಂಬುದು ಅವರಿಗೆ ಸ್ಪಷ್ಟವಾಗಿದೆ ಎಂದು ತೇಜಸ್ವಿ ಹೇಳಿದರು. ತೇಜಸ್ವಿ ಯಾದವ್ ವಿಧಾನಸಭೆಯಲ್ಲಿ ವಿರೋಧಪಕ್ಷದ ಮುಖಂಡರಾಗಿದ್ದಾರೆ. ಆದರೆ ಈ ಹೇಳಿಕೆಯನ್ನು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಳ್ಳಿಹಾಕಿದ್ದಾರೆ. ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶವಿಲ್ಲ. ಹಾಗಿರುವಾಗ ಅವರಿಗೆ ಜೀವಬೆದರಿಕೆ ಇರಲು ಹೇಗೆ ಸಾಧ್ಯ ಎಂದು ಮೋದಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News