ನೆರೆಮನೆಯವನಿಂದ ಲೈಂಗಿಕ ಕಿರುಕುಳ: 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Update: 2018-03-25 05:20 GMT

ಹೊಸದಿಲ್ಲಿ, ಮಾ. 25: ನೆರೆಮನೆಯ ಯುವಕನ ಲೈಂಗಿಕ ಕಿರುಕುಳದಿಂದ ಬೇಸತ್ತ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ದೆಹಲಿ ಹೊರವಲಯದ ಭಕ್ತವಾರಪುರ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಟಿಪ್ಪಣಿಯಲ್ಲಿ ಈ ಬಾಲಕಿ ನೆರೆಯ ವ್ಯಕ್ತಿಯೊಬ್ಬನ ಲೈಂಗಿಕ ಕಿರುಕುಳದ ಬಗ್ಗೆ ಸುಳಿವು ನೀಡಿದ್ದು, ಇದರ ಮೇರೆಗೆ ಪೊಲೀಸರು ಹಾಗೂ ಕುಟುಂಬದವರು 21 ವರ್ಷದ ಯುವಕನೊಬ್ಬನನ್ನು ಶಂಕಿತನಾಗಿ ಗುರುತಿಸಿದ್ದಾರೆ.

"ನಾನು ಹೋದಲ್ಲೆಲ್ಲ ಆ ವ್ಯಕ್ತಿ ನನ್ನನ್ನು ಹಿಂಬಾಲಿಸುತ್ತಿದ್ದ. ನನ್ನ ಜೀವನವನ್ನು ಅವರು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ನಾನೇನೂ ಮಾಡುವಂತಿಲ್ಲ" ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

ಬಾಡಿಗೆ ಮನೆಯಿಂದ ತನ್ನ ಕುಟುಂಬವನ್ನು ಒಕ್ಕಲೆಬ್ಬಿಸದಂತೆ ತಡೆಯಲು ಈ ಆತ್ಮಹತ್ಯೆಯಿಂದ ಸಾಧ್ಯವಾಗಲಿದೆ ಎಂದು ಟಿಪ್ಪಣಿಯಲ್ಲಿ ಬರೆದಿದ್ದಾಳೆ. ಶಂಕಿತನ ಪೋಷಕರ ಜತೆ ಲೈಂಗಿಕ ಕಿರುಕುಳದ ವಿಷಯ ಎತ್ತಿದಾಗಲೆಲ್ಲ, ಪುಟ್ಟ ಎರಡು ಕೊಠಡಿಯ ಮನೆಯಿಂದ ಒಕ್ಕಲೆಬ್ಬಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ವಿವರಿಸಿದ್ದಾಳೆ.

ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿಯ ವಿರುದ್ಧ ಅಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಜಿಪಿ ರಜನೀಶ್ ಗುಪ್ತಾ ಹೇಳಿದ್ದಾರೆ. ಆದರೆ ಶಂಕಿತನ ಪೋಷಕರು ಆರೋಪವನ್ನು ನಿರಾಕರಿಸಿದ್ದು, ಈ ಬಾಲಕಿಗೂ ತಮಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಹಲವು ತಿಂಗಳಿಂದ ಬಾಡಿಗೆ ಪಾವತಿಸದ ಕಾರಣ ಅವರನ್ನು ಮನೆ ಬಿಡುವಂತೆ ಕೇಳಲಾಗಿತ್ತು ಎನ್ನುವುದು ಮನೆ ಮಾಲಕನ ಸಂಬಂಧಿಕರ ಸಮರ್ಥನೆ.

ಸಂತ್ರಸ್ತೆ ಕುಟುಂಬದವರು ಬಿಹಾರ ಮೂಲದವರಾಗಿದ್ದು, ಪುಟ್ಟ ಅಂಗಡಿ ನಡೆಸುತ್ತಿದ್ದರು ಹಾಗೂ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸ್ ಆಗುವ ಕನಸು ಹೊಂದಿದ್ದ ಆಕೆ ಈ ನಿಟ್ಟಿನಲ್ಲಿ ತರಬೇತಿ ಪಡೆಯುತ್ತಿದ್ದಳು ಎಂದು ತಾಯಿ ಹೇಳಿದ್ದಾರೆ. "ಮಗಳು ಬೆಳಗ್ಗೆ ಜಾಗಿಂಗ್ ಹೋದಾಗ ಕೂಡಾ ಆ ವ್ಯಕ್ತಿ ಹಿಂಬಾಲಿಸುತ್ತಿದ್ದ. ತರಬೇತಿ ನೀಡುವ ನೆಪದಲ್ಲಿ ಅಸಭ್ಯವಾಗಿ ಸ್ಪರ್ಶಿಸುತ್ತಿದ್ದ" ಎಂದು ದೂರಿದ್ದಾರೆ.

ಕಳೆದ ಸೋಮವಾರ, ಏಕಾಂಗಿಯಾಗಿ ತನ್ನನ್ನು ಭೇಟಿಯಾಗುವಂತೆ ಕೇಳಿದ್ದ. ದೆಹಲಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ತೆಗೆಸಿಕೊಟ್ಟು, ವಿವಾಹವಾಗು ವುದಾಗಿಯೂ ಆಶ್ವಾಸನೆ ನೀಡಿದ್ದ. ಇದನ್ನು ತಿರಸ್ಕರಿಸಿದಾಗ, ಕುಟುಂಬವನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದ ಎಂದು ತಂದೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News