ಪಶ್ಚಿಮ ಬಂಗಾಳ: ರಾಮನವಮಿಗೆ ಆಯುಧಗಳೊಂದಿಗೆ ರ‍್ಯಾಲಿ ನಡೆಸಲು ಬಿಜೆಪಿ ನಿರ್ಧಾರ

Update: 2018-03-25 09:37 GMT

ಕೊಲ್ಕತ್ತಾ, ಮಾ.25: ರಾಮ ನವಮಿಯ ಸಂದರ್ಭ ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ರಾಜಕೀಯ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ವಿಪಕ್ಷ ಬಿಜೆಪಿ ರಾಮನವಮಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರ‍್ಯಾಲಿಗಳನ್ನು ಆಯೋಜಿಸಲು ಮುಂದಾಗಿದೆ.

ಭದ್ರತೆಯ ಹೊರತಾಗಿಯೂ ಬರ್ದಮಾನ್ ಜಿಲ್ಲೆಯಲ್ಲಿ ಪೂಜಾ ಪಂದಲ್ ಮೇಲೆ ದಾಳಿ ನಡೆದಿದ್ದು, ಇದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.

ಕಳೆದ ವರ್ಷದಂತೆ ಈ ವರ್ಷವೂ ಸಹ ಬಿಜೆಪಿ ರಾಜ್ಯದ ಹಲವೆಡೆ ರಾಮ ನವಮಿ ಆಚರಣೆಗೆ ಸಿದ್ಧತೆ ನಡೆಸಿದ್ದು, ಕೆಲ ಕಡೆಗಳಲ್ಲಿ ಕಾರ್ಯಕರ್ತರು ಸಾಂಪ್ರದಾಯಿಕ ಭಾರತೀಯ ಆಯುಧಗಳೊಂದಿಗೆ ರ‍್ಯಾಲಿ ನಡೆಸಲಿದ್ದಾರೆ ಎಂದು ಬಿಜೆಪಿ ನಾಯಕ ದಿಲೀಪ್ ಘೋಶ್ ಹೇಳಿದ್ದಾರೆ.

ಯಾವುದೇ ಗೂಂಡಾಗಿರಿಯನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. “ರಾಮ ನವಮಿ ಹಮ್ಮಿಕೊಳ್ಳುವ ಯಾವುದೇ ಸಂಘಟನೆಯ ವಿರುದ್ಧ ನಾವಿಲ್ಲ. ಆದರೆ ಅದು ಶಾಂತಿಯುತವಾಗಿರಬೇಕು” ಎಂದವರು ಹೇಳಿದ್ದಾರೆ. ಬಿಗಿ ಭದ್ರತೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಹೌರಾದಲ್ಲಿ ರಾಮನವಮಿ ರ‍್ಯಾಲಿ ಆಯೋಜಿಸಲು ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ. ಆದರೆ ರ‍್ಯಾಲಿಯಲ್ಲಿ ಯಾವುದೇ ಆಯುಧಗಳನ್ನು ಪ್ರದರ್ಶಿಸುವುದಿಲ್ಲ ಎಂದು ಸಚಿವ ಅರೂಪ್ ರಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News