ಆಮಿಷ ರಾಜಕಾರಣಕ್ಕೆ ಬ್ರೇಕ್ ಹಾಕಲು ಹುಚ್ಚ ವೆಂಕಟ್ ನಿರ್ಧಾರ

Update: 2018-03-25 11:31 GMT

ಮಡಿಕೇರಿ ಮಾ.25:ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಮತಗಳಿಕೆಗಾಗಿ ರಾಜ್ಯದಲ್ಲಿ ಆಮಿಷ ರಾಜಕಾರಣ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯವನ್ನು ರಾಜ್ಯವ್ಯಾಪಿ ಕೈಗೊಳ್ಳುವುದಾಗಿ ನಟ ಹಾಗೂ ನಿರ್ದೇಶಕ ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರಾಜ್ಯದ ಜನತೆಗಾಗಿ ಸಾಕಷ್ಟು ಶ್ರಮ ಪಟ್ಟಿದೆ. ಆದರೆ ಶಾಸಕ ಮುನಿರತ್ನ ಅವರು ಬಹಿರಂಗವಾಗಿ ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಂಚಿ ಮತಯಾಚಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುತ್ತಿದ್ದಾರೆ ಎಂದು ಆರೋಪಿಸಿದರು. 

ನಾನು ಯಾವುದೇ ಪಕ್ಷವನ್ನು ಟೀಕಿಸುವುದಿಲ್ಲ, ಎಲ್ಲಾ ಪಕ್ಷಗಳನ್ನು, ಪಕ್ಷಗಳ ನಾಯಕರುಗಳನ್ನು ಗೌರವಿಸುತ್ತೇನೆ. ಆದರೆ ಮತಕ್ಕಾಗಿ ಆಮಿಷವೊಡ್ಡುವುದನ್ನು ನಾನು ಹಾಗೂ ನನ್ನ ಅಭಿಮಾನಿಗಳ ಹುಚ್ಚ ವೆಂಕಟ್ ಸೇನೆ ಸಹಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು. ಸಾಕ್ಷಿ ಬೇಕು ಎನ್ನುವ ಕಾರಣಕ್ಕಾಗಿ ನನ್ನ ಅಕ್ಕನ ಮೂಲಕ ಕುಕ್ಕರ್ ನ್ನು ಪಡೆದಿದ್ದು, ಮುನಿರತ್ನ ಅವರ ಈ ಕುಕ್ಕರ್ ಆಮಿಷದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.

ಇದೊಂದು ಪ್ರಕರಣವನ್ನೇ ಮುಂದಿಟ್ಟುಕೊಂಡು ರಾಜಕಾರಣಿಗಳ ಆಮಿಷಕ್ಕೆ ಬಲಿಯಾಗದಂತೆ ರಾಜ್ಯದ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಅಭಿಮಾನಿ ಬಳಗ ಹಾಗೂ ತಾವು ಮಾಡುವುದಾಗಿ ಹುಚ್ಚ ವೆಂಕಟ್ ಮಾಹಿತಿ ನೀಡಿದರು.

ತಮ್ಮ ನಿರ್ದೇಶನದ 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರವನ್ನು ಕೊಡಗು ಜಿಲ್ಲೆಯಲ್ಲೇ ಚಿತ್ರೀಕರಣ ಮಾಡಿದ್ದು, ಟ್ರೈಲರ್ ಸಿದ್ಧವಿದೆ ಎಂದು ಹುಚ್ಚ ವೆಂಕಟ್ ಇದೇ ಸಂದರ್ಭ ತಿಳಿಸಿದರು.

ಈ ಚಿತ್ರದಲ್ಲಿ ಟಿವಿ ವರದಿಗಾರ ಹಾಗೂ ನಿರೂಪಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರ ಆರು ತಿಂಗಳ ನಂತರ ಬಿಡುಗಡೆಯಾಗಲಿದೆ. ತಮ್ಮ ತಂದೆ ಎಂ.ಲಕ್ಷ್ಮಣ್ ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು.

ಚಿತ್ರದ ನಾಯಕಿ ಐಶ್ವರ್ಯ ಮಾತನಾಡಿ ಹುಚ್ಚ ವೆಂಕಟ್ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ತಮಗೆ ಉತ್ತಮ ಅವಕಾಶ ದೊರೆತ್ತಿದೆ ಎಂದು ಹೇಳಿದರು.

ಶಾಸಕ ಮುನಿರತ್ನ ಅವರು ಮತದಾರರಿಗೆ ಹಂಚಿದ್ದಾರೆ ಎನ್ನಲಾದ ಕುಕ್ಕರ್ ಅನ್ನು ಹುಚ್ಚ ವೆಂಕಟ್ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News