ಪಡಿತರ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ : ಸಚಿವ ಯು.ಟಿ.ಖಾದರ್

Update: 2018-03-25 14:10 GMT

ಮೂಡಿಗೆರೆ, ಮಾ.25: ರಾಜ್ಯ ಸರಕಾರ ಪಡಿತರ ಚೀಟಿದಾರರ ಹಿತ ಕಾಯಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳು ಜಾರಿ ಮಾಡಲಾಗಿದ್ದು,  ಪಡಿತರ ಚೀಟಿ ವಿತರಣೆಯಲ್ಲಿ ಐತಿಹಾಸಿಕ ಬದಲಾವಣೆಯನ್ನೇ ಮಾಡಿದ್ದೇವೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು. 

ಮೂಡಿಗೆರೆಗೆ ರವಿವಾರ ಭೇಟಿ ನೀಡಿದ್ದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಪಡಿತರ ಚೀಟಿ ಪಡೆಯಲು ವಿದ್ಯುತ್ ಬಿಲ್, ಐಡಿ ಕಾರ್ಡ್, ಡೋರ್ ನಂಬರ್ ಸಹಿತ ಅನೇಕ ದಾಖಲೆಗಳನ್ನು ಪಡೆಯಲಾಗುತ್ತಿತ್ತು. ಆದರೀಗ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು. ರಸ್ತೆಬದಿಯಲ್ಲಿದ್ದವರಿಗೂ ತಕ್ಷಣಕ್ಕೆ ಪಡಿತರ ಚೀಟಿ ತತ್ಕಾಲ ಯೋಜನೆಯಲ್ಲಿ ಲಭ್ಯವಾಗುತ್ತಿದೆ ಎಂದರು. 

ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ 1,20,000 ರೂ. ನಿಗದಿಪಡಿಸಲಾಗಿದೆ. ಹೀಗಾಗಿ ಬಹುತೇಕ ಬಡವರ್ಗದವರಿಗೆ ಬಿಪಿಎಲ್ ಕಾರ್ಡ್ ಲಭ್ಯವಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿ ಪಡೆಯಲು ಕೆಲ ನಿಯಮಾವಳಿಯನ್ನು ಸಡಿಲಿಸಲಾಗಿದೆ. ಬಾಡಿಗೆ ಟ್ಯಾಕ್ಸಿ ಹೊಂದಿದವರು, ಅನಿವಾರ್ಯವಾಗಿ ವಿದ್ಯುತ್ ಬಳಸುವ ಬಡವರಿಗೆ ಬಿಪಿಎಲ್ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು, ನರ್ಸ್‍ಗಳು ಹಾಗೂ ವಿವಿಧ ಇಲಾಖೆಗಳಲ್ಲಿ ಡಿ.ಗ್ರೂಪ್‍ಗಳಲ್ಲಿ ದುಡಿಯುತ್ತಿರುವವರಿಗೆ ಸಂಬಳ ಕಡಿಮೆ. ಹೀಗಾಗಿ ಇವರಿಗೂ ಬಿಪಿಎಲ್ ಕಾರ್ಡ್‍ನೀಡಲು ಕ್ರಮ ಜರಗಿಸಲಾಗಿದೆ ಎಂದರು.  

ಈ ಹಿಂದೆ ಎಪಿಎಲ್ ವ್ಯಾಪ್ತಿಯಲ್ಲಿದ್ದವರು ತಮಗೆ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದರು. ಈಗ ಅಂತಹ ಅರ್ಹತೆಯುಳ್ಳವರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಬಿಪಿಎಲ್ ಅರ್ಜಿದಾರರಲ್ಲಿ ಶೇ.95ರಷ್ಟು ಮಂದಿ ಬಡವರೇ ಆಗಿರುತ್ತಾರೆ. ಶೇ.5ರಷ್ಟು ಮಂದಿ ಶ್ರೀಮಂತರೂ ಬಿಪಿಎಲ್‍ಗೆ ಅರ್ಜಿ ಸಲ್ಲಿಸುವುದರಿಂದ ಇದರ ವೆರಿಫಿಕೇಷನ್ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿ ಕೆಲ ಬಿಪಿಎಲ್ ಪಟ್ಟಿಯಲ್ಲಿರಬೇಕಾದವರೂ ತೊಂದರೆ ಅನುಭವಿಸುವಂತಾಗಿದೆ. 

ಮೂಡಿಗೆರೆ ತಾಲೂಕಿನಲ್ಲಿ 1138 ಕುಟುಂಬಸ್ಥರು ತತ್ಕಾಲದಲ್ಲಿ ಪಡಿತರ ಚೀಟಿ ಪಡೆದಿದ್ದು ಸುಮಾರು 5 ಸಾವಿರ ಜನರು  ನೆಮ್ಮದಿಯಿಂದಿದ್ದಾರೆ.  ಕಳೆದ ಜುಲೈಗೆ ಮುಂಚೆ ಅರ್ಜಿ ಸಲ್ಲಿಸಿದ ಕೆಲವರಿಗೆ ತಾಂತ್ರಿಕ ದೋಷವಿದ್ದರಿಂದ ಕಾರ್ಡ್ ಲಭ್ಯವಾಗಿಲ್ಲ. ಇದರಿಂದ ಮೂಡಿಗೆರೆ ತಾಲೂಕಿನಲ್ಲಿ 150ರಿಂದ 200 ಅರ್ಜಿದಾರರು ವಂಚಿತರಾಗಿದ್ದಾರೆ. ಅವರಿಗೆಲ್ಲ ಶೀಘ್ರವೇ ಕಾರ್ಡ್ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಆನ್‍ಲೈನ್ ಸಾಫ್ಟ್ ವೇರ್ ಸುಲಭಗೊಳಿಸಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ 21 ಲಕ್ಷ ಕಾರ್ಡ್ ವಿತರಿಸಲಾಗಿದೆ. ಒಂದು ಕುಟುಂಬದಲ್ಲಿ ನಾಲ್ವರು ಸದಸ್ಯರಂತೆ ಲೆಕ್ಕ ಹಾಕಿದರೆ ಸುಮಾರು 84 ಲಕ್ಷ ಮಂದಿಯಾಗುತ್ತಾರೆ. ಒಟ್ಟಾರೆ ರಾಜ್ಯದಲ್ಲಿ 1.23 ಲಕ್ಷ ಕಾರ್ಡ್‍ದಾರರಿದ್ದು ಪ್ರತೀ ಕುಟುಂಬಕ್ಕೆ ನಾಲ್ವರಂತೆ ಸುಮಾರು 5 ಕೋಟಿಯಷ್ಟು ಮಂದಿ ಪಡಿತರ ಚೀಟಿ ಹೊಂದಿ ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ಉಳಿದ 70 ಲಕ್ಷ ಸರ್ಕಾರಿ ನೌಕರರು, 6 ಲಕ್ಷ ಶ್ರೀಮಂತ ವರ್ಗದವರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಸಂಪತ್ತು ಸರ್ವರಿಗೂ ಹಂಚಿಕೆಯಾಗಬೇಕೆಂಬ ಉದ್ದೇಶವಿಟ್ಟುಕೊಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಸಹಿತ ಹಲವು ಭಾಗ್ಯಗಳನ್ನು ಕರುಣಿಸಿದ್ದಾರೆ. ಅನಿಲ ಭಾಗ್ಯದ ಯೋಜನೆಯ ಅರ್ಜಿ ಸ್ವೀಕಾರ ಪ್ರಕ್ರಿಯೆಯೂ ಆರಂಭವಾಗಿದ್ದು ಶೀಘ್ರವೇ ಆ ಯೋಜನೆಯೂ ಫಲಾನುಭವಿಗಳನ್ನು ತಲುಪಲಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಕೆ.ಇಬ್ರಾಹಿಂ, ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ನಯನಾ ಮೋಟಮ್ಮ, ಅಬ್ದುಲ್ ಶುಕುರ್, ರಮೇಶ್ ಹೊಸ್ಕೆರೆ, ದೀಕ್ಷಿತ್ ಕಣಚೂರು, ಅಜ್ಜು, ಮುಹಮ್ಮದ್ ಹಮ್ಮದ್ ಇರ್ಷಾದ್ ಮತ್ತಿತರರು ಉಪಸ್ಥಿತರಿದ್ದರು.  

ಬಹುಮಾನ ಸ್ಕೀಂ ಜಾರಿಯಾಗಲಿದೆ
ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಪ್ರತೀ ಕುಟುಂಬದ ಆದಾಯ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವೆರಿಫಿಕೇಷನ್ ನಡೆಯಲಿದೆ. ಅರ್ಹರಲ್ಲದವರು ಯಾರಾದರೂ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹ ಕುಟುಂಬಗಳನ್ನು ದಾಖಲೆಗಳ ಸಹಿತ ಪತ್ತೆ ಹಚ್ಚಿ ಮಾಹಿತಿ ನೀಡುವವರಿಗೆ 400 ರೂ. ಬಹುಮಾನ ನೀಡುವ ಸ್ಕೀಂ ಜಾರಿಗೊಳಿಸಲಾಗುವುದು.  ಪತ್ತೆ ಹಚ್ಚುವವರ ಹೆಸರನ್ನು ಗೌಪ್ಯವಾಗಿಡಲು ಕ್ರಮ ಕೈಗೊಳ್ಳಲಾಗುವುದು
- ಯು.ಟಿ.ಖಾದರ್, ಆಹಾರ ಸಚಿವ     

ಅಲ್ಪಸಂಖ್ಯಾತರಿಗೆಂದೇ ಯಾಕೆ ಸಮಾವೇಶ? 
ಮಾ.29ರಂದು ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ನಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಮುಖಂಡರೊಬ್ಬರು ಸಚಿವ ಯು.ಟಿ.ಖಾದರ್ ಅವರಿಗೆ ತಿಳಿಸಿದಾಗ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರಿಗೆಂದೇ ಯಾಕೆ ಸಮಾವೇಶ ಆಯೋಜಿಸಿಕೊಳ್ಳುತ್ತೀರಿ. ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರನ್ನು ಒಟ್ಟು ಸೇರಿಸಿ ಸಮಾವೇಶ ಮಾಡಬೇಕಿತ್ತು. ಒಂದೇ ವರ್ಗದವರನ್ನು ಕಾಂಗ್ರೆಸ್‍ಗೆ ಸೀಮಿತವೆಂದುಕೊಳ್ಳಬೇಡಿ. ಎಲ್ಲ ಧರ್ಮೀಯರೂ ಕಾಂಗ್ರೆಸ್‍ನಲ್ಲಿದ್ದಾರೆ. ಹೀಗಾಗಿ ಎಲ್ಲ ವರ್ಗದವರನ್ನೂ ಸೇರಿಸಿ ಸಮಾವೇಶ ಮಾಡಿ ಎಂದು ಸಚಿವರು ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News