ಪಂಚಾಚಾರ್ಯರು ಬಸವಣ್ಣನನ್ನು ಒಪ್ಪಿಕೊಳ್ಳಲಿ: ಪಾಟೀಲ್ ಪುಟ್ಟಪ್ಪ

Update: 2018-03-25 17:27 GMT

ಧಾರವಾಡ, ಮಾ. 25: ‘ಲಿಂಗಾಯತ ಪ್ರತ್ಯೇಕ ಧರ್ಮವನ್ನು ವಿರೋಧಿಸುವ ಬದಲಿಗೆ ಪಂಚಾಚಾರ್ಯರು ಮೊದಲು ಬಸವಣ್ಣನನ್ನು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಬಸವಣ್ಣನನ್ನು ಒಪ್ಪದವರನ್ನು ನಾವೂ ಒಪ್ಪುವುದಿಲ್ಲ’ ಎಂದು ನಾಡೋಜ ಪಾಟೀಲ್ ಪುಟ್ಟಪ್ಪ ಆಕ್ರೋಶ ಹೊರಹಾಕಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಾಚಾರ್ಯರು ಬಸವಣ್ಣನವರನ್ನು ಒಪ್ಪುವುದಿಲ್ಲ. ಬಸವಣ್ಣನೇ ನಮ್ಮ ಭಕ್ತ ಎನ್ನುತ್ತಾರೆ. ಆದರೆ ವಿಶ್ವಗುರು ಬಸವಣ್ಣನಿಗೆ ಅಪ್ಪ-ಅಮ್ಮ ಇರುವ ಹಾಗೆಯೇ ಪಂಚಾಚಾರ್ಯರು ಮೊದಲು ರೇಣುಕಾಚಾರ್ಯರ ಅಪ್ಪ-ಅಮ್ಮ ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ರಂಭಾಪುರಿ ಶ್ರೀಗಳು ಹುಬ್ಬಳ್ಳಿಯಲ್ಲಿದ್ದಾಗ ಬಸವ-ಬಸವ ಎಂದು ಹೇಳುತ್ತಿದ್ದರು. ಇದೀಗ ಅವರು ಪೀಠಾಧ್ಯಕ್ಷರಾದ ಬಳಿಕ ರೇಣುಕಾ ಎಂದು ಕನವರಿಸುತ್ತಿದ್ದಾರೆಂದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸದೆ ಪಂಚಾಚಾರ್ಯರು ಬಸವಣ್ಣನನ್ನು ಒಪ್ಪಿಕೊಳ್ಳಬೇಕೆಂದು ಸಲಹೆ ನೀಡಿದರು.

ಲಿಂಗಾಯತರು ಹಿಂದುಳಿದವರು ಅಲ್ಲ. ಅದನ್ನು ನಾನು ಒಪ್ಪುವುದಿಲ್ಲ. ನಮಗೆ ಬೇಕಾಗಿರುವುದು ಅಲ್ಪಸಂಖ್ಯಾತರ ಸ್ಥಾನವಲ್ಲ, ನಮಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ. ಇದನ್ನು ಸರಕಾರ ಕೊಡಲೇಬೇಕೆಂದ ಅವರು, ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹ ಎಂದರು.

ರಾಜ್ಯ ಸರಕಾರ ಪ್ರಕಟಿಸಿರುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ನಾಡೋಜ ಪಾಟೀಲ್ ಪುಟ್ಟಪ್ಪ ನಿರಾಕರಿಸಿದ್ದು, ಸರಕಾರ ನನಗೆ ಪ್ರಶಸ್ತಿ ನೀಡಿ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಈ ಬಗ್ಗೆ ನಾನು 2014ರಲ್ಲಿ ಪತ್ರ ಬರೆದಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News