ಪತ್ರಕರ್ತರು ಶೋಷಿತರ ದನಿಯಾಗಲಿ: ರವಿಕುಮಾರ್

Update: 2018-03-25 18:43 GMT

ಶಿವಮೊಗ್ಗ, ಮಾ.25: ಬದಲಾಗುತ್ತಿರುವ ತಂತ್ರಜ್ಞಾನ, ಜಾಗತೀಕರಣದ ಕಾಲಘಟ್ಟದಲ್ಲೂ ಪತ್ರಕರ್ತರು ನೊಂದವರ, ಶೋಷಿತರ, ಸಾಮಾಜಿಕ ನ್ಯಾಯದ ಧ್ವನಿಯಾಗಿ ಮಾನವೀಯ ನೆಲೆಯಲ್ಲಿ ಸಮಾಜವನ್ನು ಪುನರ್ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಗತಿಪರ ಚಿಂತಕ ಎನ್. ರವಿಕುಮಾರ್ ಕರೆ ನೀಡಿದ್ದಾರೆ.

ರವಿವಾರ ನಗರದ ಸಹ್ಯಾದ್ರಿ ಕಾಲೇಜ್‌ನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಕರ್ತರು ಸಾಮಾನ್ಯರೊಳಗೆ ಸಾಮಾನ್ಯನಾಗಿ ಜನರ ನೋವು,ನಲಿವುಗಳಿಗೆ ಕಿವಿಯಾಗಬೇಕು. ಎಲ್ಲಾ ಜಾತಿ, ಧರ್ಮ, ವರ್ಗದಲ್ಲಿನ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳಬೇಕು ಎಂದರು.

ತೊಂಬತ್ತರ ದಶಕದಿಂದೀಚೆಗೆ ಆದ ಉದಾರೀಕರಣದ ಫಲವಾಗಿ ಇಂದು ಮಾಧ್ಯಮ ಕ್ಷೇತ್ರ ಉದ್ಯಮವಾಗಿ ಸ್ವರೂಪಗೊಂಡಿದೆ. ಬಂಡವಾಳಶಾಹಿಗಳು ಮಾಧ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರಾಗ ಬಯಸುವ ಯುವ ಪೀಳಿಗೆಯ ಮುಂದೆ ದೊಡ್ಡ ಸವಾಲುಗಳಿವೆ. ಸೈದ್ಧಾಂತಿಕತೆ ಮತ್ತು ನೈತಿಕತೆಯೊಂದಿಗೆ ಪತ್ರಕರ್ತರಾಗಿ ಅಸ್ತಿತ್ವ ಕಾಯ್ದುಕೊಳ್ಳುವುದರ ಮಧ್ಯೆ ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಬೇಕಾಗಿದೆ ಎಂದರು.

ಇಂದು ಪರ್ಯಾಯ ಮಾಧ್ಯಮಗಳಾದ ಸಾಮಾಜಿಕ ಸಮೂಹ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯರೂ ಆದ ರವಿಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ವಹಿಸಿದ್ದರು.
ಪ್ರೊ.ಸಿರಾಜ್ ಆಹ್ಮದ್, ಪ್ರೊ.ಮಹಾದೇವಸ್ವಾಮಿ, ಪ್ರೊ.ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News