ಬಿಜೆಪಿ-ಆರೆಸ್ಸೆಸ್ ಸರಕಾರದಲ್ಲಿ ಅಂಬೇಡ್ಕರ್ ರಾಷ್ಟ್ರದ ಕನಸು ನನಸಾಗುವುದಿಲ್ಲ: ಮಾಯಾವತಿ

Update: 2018-03-26 12:42 GMT

ಲಕ್ನೋ,ಮಾ.26: ತನ್ನ ಪಕ್ಷವು ಸಮಾಜವಾದಿ ಪಾರ್ಟಿ (ಎಸ್‌ಪಿ)ಯೊಂದಿಗೆ ಮಾಡಿಕೊಂಡಿರುವ ಮೈತ್ರಿಯಲ್ಲಿ ಬಿರುಕು ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು, ಉಭಯ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿವೆಯೇ ಹೊರತು ಯಾವುದೇ ಸ್ವಾರ್ಥಕ್ಕಲ್ಲ ಎಂದು ಹೇಳಿದರು. ಕೇಂದ್ರದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲು ಪ್ರತಿಪಕ್ಷಗಳು ಒಂದಾಗಿ ಕಾರ್ಯ ನಿರ್ವಹಿಸಬೇಕಿವೆ ಎಂದು ಒತ್ತಿ ಹೇಳಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ತಪ್ಪುನೀತಿಗಳಿಂದಾಗಿ ಬಡವರು ಮತ್ತು ಯುವಜನರು ಸೇರಿದಂತೆ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸಲು ಎಲ್ಲ ಬಿಜೆಪಿಯೇತರ ಪಕ್ಷಗಳು ಒಂದಾಗ ಬೇಕು ಎಂದರು.

ಬಿಎಸ್‌ಪಿ-ಎಸ್‌ಪಿ ಮೈತ್ರಿಯನ್ನು ರಾಷ್ಟ್ರಾದ್ಯಂತ ಸ್ವಾಗತಿಸಲಾಗುತ್ತಿದೆ ಎಂದೂ ಅವರು ಹೇಳಿದರು. ‘ಮನ್‌ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಮಾಯಾವತಿ, ಬಿಜೆಪಿಯು ತನ್ನ ಆಡಳಿತದ ಕಳೆದ ನಾಲ್ಕು ವರ್ಷಗಳಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಾಟಕವಾಡುತ್ತಲೇ ಬಂದಿದೆ. ಇಂತಹ ನಾಟಕ ಅದಕ್ಕೆ ಯಾವುದೇ ರಾಜಕೀಯ ಲಾಭವನ್ನು ನೀಡುವುದಿಲ್ಲ. ಸಂವಿಧಾನಕ್ಕೆ ವಿರುದ್ಧವಾದ ಸಂಕುಚಿತ, ಕೋಮುವಾದದ ಮತ್ತು ಜಾತೀಯತೆಯ ಮನಃಸ್ಥಿತಿ ಹೊಂದಿರುವ ಬಿಜೆಪಿ ಮತ್ತು ಆರೆಸ್ಸೆಸ್ ನೇತೃತ್ವದ ಸರಕಾರದಡಿ ಅಂಬೇಡ್ಕರ್ ಅವರ ಸಮಾನತೆಯ ತತ್ತ್ವವನ್ನು ಆಧರಿಸಿದ ರಾಷ್ಟ್ರದ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News