ಸ್ಥಳಾಂತರಿತ ಜನರಿಗೆ ನಿವೇಶನ: ಮಹಾರಾಷ್ಟ್ರ ಸರಕಾರಕ್ಕೆ ಸಲಹೆ

Update: 2018-03-26 17:19 GMT

ಮುಂಬೈ, ಮಾ.26: ಈ ಹಿಂದೆ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಾರ್ವಜನಿಕ ವಸತಿ ಯೋಜನೆಗೆ ಮೀಸಲಿರಿಸಿದ ಎರಡು ನಿವೇಶನಗಳನ್ನು ಪೈಪ್‌ಲೈನ್ ಯೋಜನೆಯಿಂದ ವಸತಿ ಕಳೆದುಕೊಂಡಿರುವ 60,000ಕ್ಕೂ ಹೆಚ್ಚು ಜನರಿಗೆ ಪುನರ್ವಸತಿ ಕಲ್ಪಿಸಲು ಬಳಸುವ ಕುರಿತು ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಸಲಹೆ ನೀಡಿದೆ.

  ಹೈಕೋರ್ಟ್ ಆದೇಶದಂತೆ ತಾನ್ಸ ನೀರಿನ ಪೈಪ್‌ಲೈನ್‌ನ 10 ಮೀಟರ್ ವ್ಯಾಪ್ತಿಯೊಳಗಿರುವ ಹಲವಾರು ಮನೆಗಳನ್ನು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ (ಬಿಎಂಸಿ) ನೆಲಸಮಗೊಳಿಸಿರುವ ಕಾರಣ 60,000ಕ್ಕೂ ಹೆಚ್ಚು ಮಂದಿ ನಿರ್ವಸಿತರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಮಹುಲ್ ಉಪನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದರೆ , ಇನ್ನು ಕೆಲವರಿಗೆ ಇನ್ನೂ ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗಿಲ್ಲ. ಈ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠವು, ಉಪನಗರಗಳಾದ ಮರೋಲ್ ಹಾಗೂ ದಿಂದೊಷಿಯಲ್ಲಿ ಈ ಹಿಂದಿನ ಅಭಿವೃದ್ಧಿ ಯೋಜನೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಾರ್ವಜನಿಕ ವಸತಿ ಯೋಜನೆಗೆ ಮೀಸಲಿರಿಸಿದ್ದ ನಿವೇಶನವನ್ನು ಸ್ಥಳಾಂತರಿತ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಬಳಸಬಹುದು ಎಂದು ಸಲಹೆ ನೀಡಿತು.

 ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಈ ಎರಡು ನಿವೇಶನಗಳನ್ನು ಮರು ಮೀಸಲುಗೊಳಿಸುವ ಅಥವಾ ಈ ಜನರ ಪುನರ್ವಸತಿಗೆ ತಕ್ಷಣ ಬೇರೆ ಸ್ಥಳವನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿ ಎ.ಎಸ್.ಓಕ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News