ದಾವಣಗೆರೆ: ಹನಿಟ್ರ್ಯಾಪ್ ಪ್ರಕರಣ; ದಂಪತಿ ಬಂಧನ

Update: 2018-03-26 18:06 GMT


ದಾವಣಗೆರೆ,ಮಾ.26: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ದಂಪತಿಗಳನ್ನು ಬಂಧಿಸಿರುವ ಬಸವ ನಗರ ಪೊಲೀಸರು, ಲಕ್ಷಾಂತರ ರೂ. ಹಣ ಹಾಗೂ ಮೊಬೈಲ್ ಹ್ಯಾಂಡ್‍ಸೆಟ್ ಜಪ್ತು ಮಾಡಿದ್ದಾರೆ.

ನಗರದ ವೆಂಕಟೇಶ್, ರೇಖಾ ದಂಪತಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು, ಆಭರಣದ ಅಂಗಡಿ ವ್ಯಾಪಾರಿ ಬಾವೀಶ್(34 ವರ್ಷ)ರನ್ನು ಹನಿಟ್ರ್ಯಾಪ್‍ಗೆ ಬಳಸಿಕೊಂಡು, ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. 

ವೆಂಕಟೇಶ್, ರೇಖಾ ದಂಪತಿ ಚಿನ್ನ ಖರೀದಿಗೆಂದು ಬಾವೀಶ್‍ರ ಅಂಗಡಿ ಹೋಗಿದ್ದರು. ಹೀಗೆ ಹೋದಾಗಲೇ ಬಾವೀಶ್‍ರ ನಂಬರನ್ನು ದಂಪತಿ ಪಡೆದಿದ್ದರು. ಕೆಲ ತಿಂಗಳಿನಿಂದಲೂ ರೇಖಾ ಚಿನ್ನಾಭರಣ ವ್ಯಾಪಾರಿ ಬಾವೀಶ್‍ಗೆ ಫೋನ್ ಮಾಡಿ ಮಾತನಾಡುತ್ತಿದ್ದಳು. ದಂಪತಿಗಳು ಚಿನ್ನಾಭರಣ ವ್ಯಾಪಾರಿ ಬಾವೀಶ್‍ನ ಜೊತೆ ಸಲಿಗೆಯಿಂದಲೇ ಮಾತನಾಡುತ್ತಾ ಹನಿಟ್ರ್ಯಾಪ್ ಬಲೆಗೆ ಕೆಡವಿದ್ದರು. ರೇಖಾ ಮಾತಿಗೆ ಕಿವಿಗೊಟ್ಟು ಹೋದ ಬಾವೀಶ್‍ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆಗ ರೇಖಾ-ಬಾವೀಶ್ ಜೊತೆಗಿರುವ ವೀಡಿಯೋ ಆಕೆ ಪತಿ ವೆಂಕಟೇಶ ಮಾಡಿಕೊಂಡು, ನಂತರ ಹಣಕ್ಕಾಗಿ ಬಾವೀಶ್‍ನನ್ನು ಪೀಡಿಸಲಾರಂಭಿಸಿದ್ದ ಎಂದು ಹೇಳಲಾಗಿದೆ. 

ರೇಖಾ, ಬಾವೀಶ ಜೊತೆಗಿರುವ ವೀಡಿಯೋ ತೋರಿಸಿ, ವೆಂಕಟೇಶನು ಚಿನ್ನಾಭರಣ ವ್ಯಾಪಾರಿಯಿಂದ ಸುಮಾರು 5 ಲಕ್ಷ ರು. ವಸೂಲಿ ಮಾಡಿದ್ದ. ಮತ್ತೆ ಹಣಕ್ಕೆ ಪೀಡಿಸಲಾರಂಭಿಸಿದ್ದರಿಂದ ಬಾವೀಶ್ ಬಸವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News