ಬಾಬಾಸಾಹೇಬರ ಸಂವಿಧಾನ ಅಪಾಯದಲ್ಲಿದೆ: ಉ.ಪ್ರದೇಶ ಬಿಜೆಪಿ ಸಂಸದೆ

Update: 2018-03-29 10:16 GMT

ಲಕ್ನೋ, ಮಾ.29: ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ಕ್ರಮದ ಬಗ್ಗೆ ಸರಕಾರ ವಹಿಸಿರುವ ಮೌನ ಬಿಜೆಪಿಯ ಸಹಿತ ಎಲ್ಲಾ ಪಕ್ಷಗಳ ದಲಿತ ಸಂಸದರಿಗೆ ಅಸಮಾಧಾನ ಉಂಟು ಮಾಡಿರುವಂತೆಯೇ ಬಹ್ರೈಚ್ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿಯ ದಲಿತ ಸಂಸದೆ ಸಾಧ್ವಿ ಸಾವಿತ್ರಿ ಭಾಯ್ ಫುಲೆ ಅವರು ಭಾರತೀಯ ಸಂವಿಧಾನ್ ಬಚಾವೋ ರ್ಯಾಲಿಯನ್ನು ಲಕ್ನೋದಲ್ಲಿನ ಕಾನ್ಶಿರಾಂ ಸ್ಮೃತಿ ಉಪವನದಲ್ಲಿ ಎಪ್ರಿಲ್ 1ರಂದು  ಆಯೋಜಿಸಿದ್ದಾರೆ.

ಸಂವಿಧಾನಕ್ಕೆ  ಅಪಾಯವಿದೆ ಎಂದು ಹೇಳುವ ಫುಲೆ, "ಕೆಲವೊಮ್ಮೆ ಅವರು ಸಂವಿಧಾನವನ್ನು ಬದಲಾಯಿಸುತ್ತಾರೆ  ಎಂದು ಹೇಳಲಾಗುತ್ತದೆ ಹಾಗೂ ಕೆಲವೊಮ್ಮೆ ಅವರು ಮೀಸಲಾತಿ ಅಂತ್ಯಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಬಾಸಾಹೇಬ್ ಅವರ ಸಂವಿಧಾನ ಸುರಕ್ಷಿತವಾಗಿಲ್ಲ'' ಎಂದರು.

ಹಿಂದುಳಿದ ವರ್ಗಗಳ ವಿರುದ್ಧ ಸಂಚೊಂದು ನಡೆಯುತ್ತಿದೆ ಎಂದು ಆರೋಪಿಸುವ ಅವರು, ಇದು ಬಹುಜನ ಸಮಾಜದ ಹಕ್ಕುಗಳಿಗಾಗಿ  ಹೋರಾಟ, ಪಕ್ಷಾತೀತವಾಗಿ ಜನರು ಭಾಗವಹಿಸಬೇಕು'' ಎಂದಿದ್ದಾರೆ.

"ಸಂಸತ್ತಿನಿಂದ ರಸ್ತೆಗಳ ತನಕ ನಾನು ಮೀಸಲಾತಿಯ ವಿಷಯ ಎತ್ತುತ್ತೇನೆ, ಅದು ನಮ್ಮ ಹಕ್ಕು, ಮೀಸಲಾತಿಯಿಲ್ಲದೇ ಇದ್ದರೆ ನನ್ನಂತಹ ಅನೇಕ ಪರಿಶಿಷ್ಟರು  ಸಂಸತ್ತು ಪ್ರವೇಶಿಸುತ್ತಿರಲಿಲ್ಲ ಅಥವಾ ವೈದ್ಯರು ಯಾ ರಾಷ್ಟ್ರಪತಿ ಆಗುತ್ತಿರಲಿಲ್ಲ'' ಎಂದು 38 ವರ್ಷದ ಈ ಸಂಸದೆ ಹೇಳಿದರು.

ದಲಿತ ನಾಯಕ ಅಂಬೇಡ್ಕರ್ ಅವರಿಗೆ ಬಿಜೆಪಿ ನಿಜವಾದ ಗೌರವ ನೀಡುತ್ತಿದೆ ಎಂದು ಈ ಹಿಂದೆ ಹೇಳಿದ್ದ ಫೂಲೆ ಈಗ ತಮ್ಮ ನಿಲುವು ಬದಲಾಯಿಸಿದ್ದ ಬಗ್ಗೆ ಪ್ರಶ್ನಿಸಿದಾಗ ``ಒಬ್ಬರ ಹಕ್ಕಿನ ಬಗ್ಗೆ ಮಾತನಾಡುವಾಗ ಅದನ್ನು ಯಾರದೇ ವಿರುದ್ಧದ ಬಂಡಾಯ ಎಂದು ತಿಳಿಯುವ ಅಗತ್ಯವಿಲ್ಲ ,'' ಎಂದರು.

ನಮ್ಮ ಹಕ್ಕುಗಳಿಗಾಗಿನ ಹೋರಾಟವನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಲ್ಲೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News