​ಚಿಕ್ಕಮಗಳೂರು: ಸಮಾಜದ ಶಾಂತಿಗೆ ಮಹಾವೀರನ ತತ್ವಗಳು ಅತ್ಯಗತ್ಯ; ಡಿಸಿ ಶ್ರೀರಂಗಯ್ಯ

Update: 2018-03-29 12:02 GMT

ಚಿಕ್ಕಮಗಳೂರು, ಮಾ.29: ಭಗವಾನ್ ಮಹಾವೀರರ ಜೀವನ ಮೌಲ್ಯ, ತತ್ವಾದರ್ಶಗಳು ಸಾರ್ವಕಾಲಿಕವಾದವುಗಳು. ಅವುಗಳನ್ನು ಅನುಸರಿಸಿದಾಗ ಸಮಾಜದಲ್ಲಿ ಶಾಂತಿ ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ 30ನೇ ವಯಸ್ಸಿನಲ್ಲಿ ಲೌಖಿಕ ಬದುಕನ್ನು ತೊರೆದು, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಲೌಖಿಕ ಮಾರ್ಗವನ್ನು ಹಿಡಿಯುವ ಮೂಲಕ, ಇತರರು ತಮ್ಮ ತತ್ವಾದರ್ಶಗಳನ್ನು ಅಹಿಂಸೆ ಮಾರ್ಗದಲ್ಲಿ ಅನುಸರಿಸುವಂತೆ ಮಾಡಿದ ಮಹಾಪುರುಷ ಮಹಾವೀರ. ಇಂತಹ ವ್ಯಕ್ತಿಗಳ ತತ್ವಾದರ್ಶಗಳನ್ನು ನಾವು ಅನುಸರಿಸಿದಾಗ ಸಮಾಜದಲ್ಲಿ ಶಾಂತಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ ಪಾಲನೆ, ಅಪರಿಗ್ರಹ ಈ ಐದು ತತ್ವ ಭೋಧನೆಗಳನ್ನು ಅನುಸರಿಸುವಂತೆ ಮಾರ್ಗದರ್ಶನ ನೀಡಿದ ಮಹಾವೀರರು ಪ್ರತಿಯೊಬ್ಬರಿಗೂ ಆದರ್ಶ ವ್ಯಕ್ತಿ ಎಂದ ಅವರು ಪ್ರತಿಯೊಬ್ಬರೂ ಮಹಾಪುರುಷರ ಜೀವನ ಮೌಲ್ಯ ಮತ್ತು ಆದರ್ಶಗಳನ್ನು ಅನುಸರಿಸುವುದರಿಂದ ಪ್ರಸ್ತುತ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಕಾರ್ಯಕ್ರಮಗಳು ಸಾರ್ಥಕ ಪಡೆದುಕೊಳ್ಳುತ್ತವೆ ಎಂದರು.

24ನೇ ತೀರ್ಥಂಕರ ಎಂದು ಕರೆಸಿಕೊಳ್ಳುವ ಮಹಾವೀರ ತಮ್ಮ 71ನೇ ವಯಸ್ಸಿನಲ್ಲಿ ಮೋಕ್ಷ ಹೊಂದಿದರು. ಇವರ ಮಾರ್ಗದರ್ಶನ ಸಾವಿರಾರು ವರ್ಷಗಳು ಕಳೆದರೂ ಪ್ರಸ್ತುತತೆ ಪಡೆದುಕೊಳ್ಳುತ್ತವೆ ಎಂದ ಅವರು ಪ್ರತಿಯೊಬ್ಬರೂ ಮಹಾವೀರರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ತಮ್ಮ ಮುಂದಿನ ಪೀಳಿಗೆಗೂ ಅವುಗಳನ್ನು ಕೊಂಡೊಯ್ಯಬೇಕು ಎಂದು ತಿಳಿಸಿದರು.

ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಭಗವಾನ್ ಮಹಾವೀರರು ಕ್ಷತ್ರಿಯ ವಂಶದಲ್ಲಿ ಜನಿಸಿದ್ದರೂ ಬಹಿರಂಗ ಯುದ್ದದಂತಹ ಕಲೆಗಳ ಬಗ್ಗೆ ಚಿಂತಿಸದೇ ಮನುಷ್ಯನ ಜೀವನದ ಅಂತರಂಗದ ಅರಿಷಡ್ವರ್ಗಗಳ ಬಗ್ಗೆ ಚಿಂತಿಸಿ ಸರಳ ಹಾಗೂ ಶಾಂತಿಯ ಮಾರ್ಗವನ್ನು ಅನುಸರಿಸಲು ತಿಳಿಸಿದರು. ವಿಶ್ವದ ಶಾಂತಿಗಾಗಿ ಇರುವ ಅಲಿಪ್ತ ನೀತಿಗಳಲ್ಲಿ ಮಹಾವೀರನ ತತ್ವಗಳಿವೆ. ಅವುಗಳನ್ನು ವಿಶ್ವದ ಪ್ರತಿಯೊಬ್ಬರೂ ಅಳವಡಿಸಿಕೊಂಡಲ್ಲಿ ಸಮೃದ್ಧ ಶಾಂತಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್ ಹಾಗೂ ಜೈನ ಸಂಘದ ಅಧ್ಯಕ್ಷ ಗೌತಮ್ ಚಂದ್ ಜೈನ್,  ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News