ಕಾಶ್ಮೀರದ ಮಾನವ ಕವಚ ಚಿತ್ರದ ಟೀ-ಶರ್ಟ್ ಮಾರಾಟ ಮಾಡುತ್ತಿರುವ ಬಿಜೆಪಿ ನಾಯಕ

Update: 2018-03-29 15:04 GMT

ಹೊಸದಿಲ್ಲಿ, ಮಾ.29: 2017ರ ಎಪ್ರಿಲ್‌ನಲ್ಲಿ 53ನೇ ರಾಷ್ಟ್ರೀಯ ರೈಫಲ್‌ನ ಮೇಜರ್ ನಿತಿನ್ ಲೀತುಲ್ ಗೊಗೊಯಿ ಕಾಶ್ಮೀರದ ಯುವಕನೊಬ್ಬನನ್ನು ತನ್ನ ವಾಹನದ ಮುಂದೆ ಕವಚದಂತೆ ಕಟ್ಟಿ ಹಾಕಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಟಿ-ಶರ್ಟ್ ಬೈಯ್ಯ ಎಂಬ ಆನ್‌ಲೈನ್ ಉಡುಪು ಮಾರಾಟ ಮಳಿಗೆಯು, ಈ ಮಾನವ ಕವಚದ ಚಿತ್ರವುಳ್ಳ ಟಿ-ಶರ್ಟ್‌ಅನ್ನು 495 ರೂ.ಗೆ ಮಾರಾಟ ಮಾಡುತ್ತಿದೆ. ಈ ಆನ್‌ಲೈನ್ ಮಾರಾಟ ಮಳಿಗೆಯ ಮಾಲಕ ದಿಲ್ಲಿ ಬಿಜೆಪಿ ವಕ್ತಾರ ತಜಿಂದರ್ ಪಾಲ್ ಸಿಂಗ್ ಬಗ್ಗ.

ಕಾಶ್ಮೀರಿ ಯುವಕ ಫಾರೂಕ್ ಅಹ್ಮದ್ ದರ್‌ನನ್ನು ಮಾನವ ಕವಚದಂತೆ ಬಳಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತೀವ್ರ ಮುಜುಗರಕ್ಕೀಡಾಗಿತ್ತು. ಬಗ್ಗ ವಿರುದ್ಧ ದರ್ ಮಾನಹಾನಿ ಮೊಕದ್ದಮೆಯನ್ನು ಹೂಡಿದ್ದರು. ಆದರೆ ಇದ್ಯಾವುದಕ್ಕೂ ಜಗ್ಗದ ಬಿಜೆಪಿ ವಕ್ತಾರ, ಕಲ್ಲು ಎಸೆಯುವ ಯುವಕನ ಚಿತ್ರವುಳ್ಳ ಟಿ-ಶರ್ಟ್‌ನ ಮಾರಾಟವನ್ನು ನಿಲ್ಲಿಸುವುದಿಲ್ಲ ಎಂದು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ, ನಾನು ಈ ಟಿ-ಶರ್ಟನ್ನು ಕೇವಲ ಲಾಭಕ್ಕಾಗಿ ಮಾರಾಟ ಮಾಡುತ್ತಿಲ್ಲ. ಈ ಟಿ-ಶರ್ಟ್ ಸ್ವತಂತ್ರಕ್ಕಾಗಿ ಹೋರಾಡುತ್ತಿರುವ ಕಾಶ್ಮೀರಿಗಳಿಗೆ ನೀಡಿದ ಸಂದೇಶವಾಗಿದೆ ಎಂದು ಬಗ್ಗ ತಿಳಿಸಿದ್ದಾರೆ.

ಈ ಟಿ-ಶರ್ಟನ್ನು ಆನ್‌ಲೈನ್ ಸಂಸ್ಥೆಯು ಮೇಜರ್ ಗೊಗೊಯಿಗೆ ಸಮರ್ಪಿಸಿದೆ. ಇದು ಸಂಸ್ಥೆಯ ಇದುವರೆಗಿನ ಅತೀಹೆಚ್ಚು ಮಾರಾಟವಾಗಿರುವ ಟಿ-ಶರ್ಟ್ ಆಗಿದೆ ಎಂದೂ ಬಗ್ಗ ತಿಳಿಸಿದ್ದಾರೆ.ಈ ಟಿ-ಶರ್ಟ್‌ನಲ್ಲಿ ವ್ಯಕ್ತಿಯನ್ನು ಜೀಪಿನ ಬೋನೆಟ್‌ಗೆ ಕಟ್ಟಿ ಹಾಕಿರುವ ಚಿತ್ರವನ್ನು ಮುದ್ರಿಸಲಾಗಿದೆ ಎಂದು ಕಾಶ್ಮೀರದ ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ಸೇನೆಯು ಮೇಜರ್ ಗೊಗೊಯಿಗೆ ಕ್ಲೀನ್‌ಚಿಟ್ ಮಾತ್ರವಲ್ಲ, ಮುಖ್ಯಸ್ಥರ ಶ್ಲಾಘನೆ ಪತ್ರವನ್ನು ಕೂಡಾ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News