ಜಿಎಸ್‌ಟಿ ತೆರಿಗೆಕಳ್ಳರಿಗೆ ಸರ್ಕಾರ ಬಲೆ

Update: 2018-03-30 03:33 GMT

ಹೊಸದಿಲ್ಲಿ, ಮಾ.30: ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತಪ್ಪಿಸುವವರಿಗೆ ಸರ್ಕಾರ ಬಲೆ ಬೀಸಿದೆ. ಈ ಮೂಲಕ ತೆರಿಗೆ ತಪ್ಪಿಸುವವರನ್ನು ಹಿಡಿಯುವ ಸಂದೇಶ ರವಾನಿಸಿದೆ.

ಕೇಂದ್ರೀಯ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿಯ ಜಿಎಸ್‌ಟಿ ವಿಚಕ್ಷಣಾ ವಿಭಾಗದ ಮಹಾನಿರ್ದೇಶನಾಲಯ ದೇಶವ್ಯಾಪಿ ತೆರಿಗೆ ತಪ್ಪಿಸುವವರ ಕಾರ್ಯಾಚರಣೆಯನ್ನು ಮಂಗಳವಾರ ಆರಂಭಿಸಿದ್ದು, ಇದುವರೆಗೆ 440 ಕೋಟಿ ರೂ. ಮೌಲ್ಯದ ತೆರಿಗೆ ತಪ್ಪಿಸುವಿಕೆಯನ್ನು ಪತ್ತೆ ಮಾಡಿದೆ ಎಂದು ಬೆಳವಣಿಗೆಗಳ ಬಗ್ಗೆ ಖಚಿತ ಮಾಹಿತಿ ಇರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತೆರಿಗೆ ಪಾವತಿಸದಿರುವುದು, ತೆರಿಗೆ ವಿನಾಯ್ತಿಗಳನ್ನು ಸುಳ್ಳಾಗಿ ಕ್ಲೇಮ್ ಮಾಡುವುದು ಮತ್ತು ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸದಿರುವುದು ಮತ್ತಿತರ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ತನಿಖೆಗೆ ಗುರಿಯಾಗಿರುವ ಬಹುತೇಕ ಘಟಕಗಳು ಮಧ್ಯಮ ಗಾತ್ರದ ಉದ್ದಿಮೆಗಳು.

ಕಬ್ಬಿಣ ಮತ್ತು ಉಕ್ಕು, ಬಂದರು ಸೇವೆ, ಸಂಘಟಿತ ಚಿಲ್ಲರೆ ಮಾರಾಟಗಾರ ಜಾಲದಲ್ಲಿ ವ್ಯಾಪಕ ಪ್ರಮಾಣದ ತೆರಿಗೆಗಳ್ಳತನ ಪತ್ತೆಯಾಗಿದೆ. ಹೊಸ ತೆರಿಗೆ ವ್ಯವಸ್ಥೆ ಜುಲೈ 1ರಂದು ಜಾರಿಗೆ ಬಂದ ಬಳಿಕ ನಡೆಸಿರುವ ಮೊಟ್ಟಮೊದಲ ಕಾರ್ಯಾಚರಣೆ ಇದಾಗಿದೆ.

ಅಧಿಕಾರಿಗಳು ಇದುವರೆಗೆ ಹೊಸ ವ್ಯವಸ್ಥೆ ಬಗ್ಗೆ ತೆರಿಗೆ ಪಾವತಿದಾರರಿಗೆ ನೆರವು ನೀಡುವ ಬಗ್ಗೆ ಗಮನಹರಿಸಿದ್ದರು ಎಂದು ಅಧಿಕೃತ ಮೂಲಗಳು ಹೇಳಿವೆ. ಈ ಕಾರ್ಯಾಚರಣೆಯಲ್ಲಿ 125 ಘಟಕಗಳು ಹಾಗೂ 110 ಉಪ ಘಟಕಗಳನ್ನು ತನಿಖೆಗೆ ಗುರಿಪಡಿಸಿ ತಕ್ಷಣ 49 ಕೋಟಿ ರೂ. ವಸೂಲಿ ಮಾಡಲಾಗಿದೆ. ಚೆನ್ನೈ ನಗರದಲ್ಲೇ 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ತೆರಿಗೆ ಕಳ್ಳತನ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News