ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ 'ಆಪರೇಷನ್ ಕಮಲ'!

Update: 2018-03-30 17:20 GMT
ಬಿ.ಕೆ.ಸಂಗಮೇಶ್ವರ್, ಜಿ.ಆರ್.ಪ್ರವೀಣ್‍ ಕುಮಾರ್, ಅಪ್ಪಾಜಿಗೌಡ 

ಶಿವಮೊಗ್ಗ, ಮಾ.30: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ದಿವಂಗತ ರಾಜಶೇಖರಪ್ಪರವರ ಪುತ್ರ, ಯುವ ಮುಖಂಡ ಜಿ.ಆರ್.ಪ್ರವೀಣ್‍ ಕುಮಾರ್ ರವರನ್ನು ಬಿಜೆಪಿ ಪಕ್ಷ ಸೆಳೆದುಕೊಳ್ಳುವಲ್ಲಿ ಸಫಲವಾಗಿದೆ. ಇದು ಭದ್ರಾವತಿ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ಜಿ.ಆರ್.ಪ್ರವೀಣ್‍ ಕುಮಾರ್ ವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗೌಪ್ಯ ಸಮಾಲೋಚನೆ ನಡೆಸಿದ್ದರು. ಈ ಮಾತುಕತೆ ಫಲಪ್ರದವಾಗಿದ್ದ ಕಾರಣದಿಂದ, ಜಿ.ಆರ್.ಪ್ರವೀಣ್‍ಕುಮಾರ್ ಕಾಂಗ್ರೆಸ್ ತೊರೆಯಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕುರಿತಂತೆ ಜಿ.ಆರ್.ಪ್ರವೀಣ್‍ಕುಮಾರ್ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಅವರ  ಆಪ್ತ  ಮೂಲಗಳು  ಜಿ.ಆರ್. ಪ್ರವೀಣ್‍ಕುಮಾರ್ ಕಾಂಗ್ರೆಸ್ ತೊರೆಯುತ್ತಿರುವುದನ್ನು ಖಚಿತಪಡಿಸುತ್ತಿವೆ. ಶನಿವಾರ ಶಿಕಾರಿಪುರ ಪಟ್ಟಣಕ್ಕೆ ಆಗಮಿಸಲಿರುವ  ಬಿ.ಎಸ್.ಯಡಿಯೂರಪ್ಪರವ  ಸಮ್ಮುಖದಲ್ಲಿ ಅವರು ತಮ್ಮ ಕೆಲ ಬೆಂಬಲಿಗರೊಂದಿಗೆ ವಿಧ್ಯುಕ್ತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಅಥವಾ ಭದ್ರಾವತಿಯಲ್ಲಿ ನಡೆಯಲಿರುವ ಪಕ್ಷದ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಜಿ.ಆರ್.ಪ್ರವೀಣ್‍ ಕುಮಾರ್ ರವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರ ಮಾಡಿಕೊಳ್ಳಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಂತ್ರಗಾರಿಕೆ: ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಅತ್ಯಂತ ಕೆಳಮಟ್ಟದಲ್ಲಿದೆ. ಇಲ್ಲಿಯವರೆಗೂ ಬಿಜೆಪಿ ಪಕ್ಷ ಈ ಕ್ಷೇತ್ರದಲ್ಲಿ ತನ್ನ ಖಾತೆಯನ್ನೇ ತೆರೆದಿಲ್ಲ. ಆದರೆ ಈ ಚುನಾವಣೆಯಲ್ಲಿ ಶತಾಯಗತಾಯ ಭದ್ರಾವತಿ ಕ್ಷೇತ್ರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ರಣತಂತ್ರವನ್ನು ಬಿ.ಎಸ್.ಯಡಿಯೂರಪ್ಪ ನಡೆಸುತ್ತಿದ್ದಾರೆ. ಭದ್ರಾವತಿಯಲ್ಲಿ  ಒಕ್ಕಲಿಗ, ಲಿಂಗಾಯತ, ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿದೆ. ಲಿಂಗಾಯತರಲ್ಲಿ ಸಾಧು ಲಿಂಗಾಯತ ವರ್ಗದ ಮತದಾರರು ಅತ್ಯದಿಕವಾಗಿದ್ದಾರೆ.  ಜಿ.ಆರ್.ಪ್ರವೀಣ್‍ ಕುಮಾರ್ ಕೂಡ ಸಾಧು ಲಿಂಗಾಯತ ವರ್ಗಕ್ಕೆ ಸೇರಿದವರಾಗಿದ್ದಾರೆ.  ಈ  ಕಾರಣದಿಂದ  ಅವರನ್ನು  ಬಿಜೆಪಿ ಸೆಳೆದುಕೊಂಡು  ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.

ಬದಲಾವಣೆ: ಇತ್ತೀಚಿನ ಚುನಾವಣೆಗಳಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಅಪ್ಪಾಜಿಗೌಡ ಅಥವಾ ಬಿ.ಕೆ.ಸಂಗಮೇಶ್ವರ್ ರವರಲ್ಲಿ ಓರ್ವರು ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಇವರಿಬ್ಬರ ನಡುವೆಯೇ ಭದ್ರಾವತಿ ರಾಜಕಾರಣ ಗಿರಕಿ ಹೊಡೆಯುತ್ತಿದೆ. ಇದೀಗ ಇವರಿಬ್ಬರನ್ನು ಓವರ್ ಟೇಕ್ ಮಾಡಲು ಬಿಜೆಪಿ ಪಕ್ಷ ಕಸರತ್ತು ನಡೆಸುತ್ತಿದೆ.  ರಾಜಕೀಯ ದಾಳ ಉರುಳಿಸಲಾರಂಭಿಸಿದೆ. ಈ ಕಾರಣದಿಂದಲೇ  ಇತ್ತೀಚೆಗೆ ಕೇಂದ್ರ  ಉಕ್ಕು ಸಚಿವರನ್ನು  ಭದ್ರಾವತಿಗೆ ಕರೆತಂದು ನಷ್ಟದಲ್ಲಿರುವ ವಿಐಎಸ್‍ಎಲ್ ಕಾರ್ಖಾನೆ ಅಭಿವೃದ್ದಿಗೆ ಕ್ರಮಕೈಗೊಳ್ಳುವ  ಭರವಸೆಯನ್ನು  ಬಿ.ಎಸ್.ಯಡಿಯೂರಪ್ಪ  ಕಾರ್ಮಿಕರಿಗೆ ನೀಡಿದ್ದರು. ಇದಕ್ಕೂ ಮುನ್ನ ಭದ್ರಾವತಿ ಪಟ್ಟಣದಲ್ಲಿ ಪರಿವರ್ತನಾ ರ್ಯಾಲಿ ಕೂಡ ಆಯೋಜಿಸಿ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದರು.

ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರ ಕೂಡ ನಡೆದಿತ್ತು. ಆದರೆ ಎಸ್.ರುದ್ರೇಗೌಡರವರು ಭದ್ರಾವತಿಯಿಂದ ಕಣಕ್ಕಿಳಿಯದಿರುವ ನಿರ್ಧಾರ ಮಾಡಿದ್ದರು. ಇದೀಗ ಸಾಧು ಲಿಂಗಾಯತ ಸಮುದಾಯಕ್ಕೆ ಸೇರಿದ ಜಿ.ಆರ್.ಪ್ರವೀಣ್ ಪಟೇಲ್‍ರನ್ನು ಕಾಂಗ್ರೆಸ್‍ನಿಂದ ಸೆಳೆದು, ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಚಿಂತನೆ ಬಿ.ಎಸ್.ವೈ.ರವರದ್ದಾಗಿದೆ. ಈ ಹೊಸ ಬದಲಾವಣೆಯು ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. ಒಟ್ಟಾರೆ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನಡೆಸುತ್ತಿರುವ ರಾಜಕಾರಣ ಸಾಕಷ್ಟುಗಮನ ಸೆಳೆಯುತ್ತಿದ್ದು, ಮುಂದೆನಾಗಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಟಿಕೆಟ್ ರೇಸ್‍ನಲ್ಲಿ ಸಂಗಮೇಶ್ವರ್, ಬಲ್ಕೀಷ್ ಭಾನು

ಭದ್ರಾವತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ್, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷೆ ಬಲ್ಕೀಷ್ ಭಾನು, ಮುಖಂಡರಾದ ಸನಾವುಲ್ಲಾ ಪೈಪೋಟಿ  ನಡೆಸುತ್ತಿದ್ದಾರೆ.  ಬಿ.ಕೆ.ಸಂಗಮೇಶ್ವರ್  ಅಥವಾ ಬಲ್ಕೀಷ್  ಭಾನುರವರಲ್ಲಿ ಓರ್ವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಇದು ಇನ್ನಷ್ಟೆ ಖಚಿತವಾಗಬೇಕಾಗಿದೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News