ಆಸ್ಟ್ರೇಲಿಯದ ವನಿತೆಯರಿಗೆ ಸರಣಿ ಜಯ

Update: 2018-03-31 18:57 GMT

ಮುಂಬೈ, ಮಾ.31: ನಾಯಕಿ ಮೆಗ್ ಲ್ಯಾನಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಲ್ಲಿ ಆಸ್ಟ್ರೇಲಿಯದ ಮಹಿಳೆಯರ ತಂಡ ಟ್ವೆಂಟಿ-20 ತ್ರಿಕೋನ ಕ್ರಿಕೆಟ್ ಸರಣಿಯ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 57 ರನ್‌ಗಳ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಆಸ್ಟ್ರೇಲಿಯ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 209 ರನ್ ಗಳಿಸಿತ್ತು.

ಗೆಲುವಿಗೆ 210 ರನ್‌ಗಳ ಕಠಿಣ ಸವಾಲು ಪಡೆದ ಇಂಗ್ಲೆಂಡ್‌ನ ವನಿತೆಯರ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿತು.

ಇಂಗ್ಲೆಂಡ್ ತಂಡದ ನಥಾಲಿಯಾ ಸೇವೆರ್ 50 ರನ್(42ಎ, 5ಬೌ) ದಾಖಲಿಸಿರುವುದು ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

 ಇಂಗ್ಲೆಂಡ್‌ನ ವನಿತೆಯರ ತಂಡದ ಇನಿಂಗ್ಸ್ ಆರಂಭದಲ್ಲೇ ಚೆನ್ನಾಗಿರಲಿಲ್ಲ. 5 ಓವರ್‌ಗಳಲ್ಲಿ 46 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕೈ ಚೆಲ್ಲಿತ್ತು. ಆರಂಭಿಕ ಆಟಗಾರ್ತಿ ಬ್ರೆಯೋನಿ ಸ್ಮಿತ್(0) ಮತ್ತು ಟಾಮೈ ಬಿಯೊಮಂಟ್ (0) ಖಾತೆ ತೆರೆಯದೆ ನಿರ್ಗಮಿಸಿದರು. ಮೂರನೇ ವಿಕೆಟ್‌ಗೆ ಡ್ಯಾನಿಲ್ಲೆ ವೇಟ್ ಮತ್ತು ನಥಾಲಿಯಾ ಸೇವೆರ್ 33 ರನ್ ಸೇರಿಸಿದರು.

ವೇಟ್ 34 ರನ್ ಗಳಿಸಿದರು. ವಿಕೆಟ್ ಕೀಪರ್ ಅಮಿ ಎಲನ್ ಜೋನ್ಸ್ (30) ಮತ್ತು ಫ್ರಾನ್ ವಿಲ್ಸನ್ (14) ಎರಡಂಕೆಯ ಸ್ಕೋರ್ ದಾಖಲಿಸಿದರು. ಸೇವೆರ್ 42 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 50 ಅರ್ಧಶತಕ ದಾಖಲಿಸಿದ ಬೆನ್ನಲ್ಲೇ ಇಂಗ್ಲೆಂಡ್ ಕುಸಿತದ ಹಾದಿ ಹಿಡಿಯಿತು.ಮತ್ತೆ ಚೇತರಿಸಿಕೊಳ್ಳಲಿಲ್ಲ. ಆಸ್ಟ್ರೇಲಿಯದ ಮೆಗಾನ್ ಚುಟ್ (14ಕ್ಕೆ 3), ಡೆಲಿಸ್ಸಾ ಕಿಮ್ಮೆನ್ಸ್(35ಕ್ಕೆ 2), ಅಶ್ಲೇಗ್ ಗಾರ್ಡೆನರ್(20ಕ್ಕೆ 2) ದಾಳಿಯನ್ನು ಎದುರಿಸಲಾರದೆ ಇಂಗ್ಲೆಂಡ್‌ನ ವನಿತಾ ತಂಡ 152 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯ 209/4: ಆಸ್ಟ್ರೇಲಿಯ ತಂಡ ಮೊದಲ ಓವರ್‌ನಲ್ಲಿ ಆರಂಭಿಕ ಆಟಗಾರ್ತಿ ಬೆಥ್ ಮೂನಿ (0) ವಿಕೆಟ್ ಕಳೆದುಕೊಂಡರೂ, ಒತ್ತಡಕ್ಕೆ ಸಿಲುಕಲಿಲ್ಲ. ಎರಡನೇ ವಿಕೆಟ್‌ಗೆ ಗಾರ್ಡೆನರ್ ಮತ್ತು ಅಲಿಸ್ಸಾ ಹಿಲೈ ಎರಡನೇ ವಿಕೆಟ್‌ಗೆ 61 ರನ್ ಸೇರಿಸಿದರು. ಗಾರ್ಡೆನರ್ 33 ರನ್ ಗಳಿಸಿ ನಿರ್ಗಮಿಸಿದ ಬೆನ್ನಲ್ಲೇ ಹಿಲೈ (33) ಕೂಡಾ ಔಟಾಗಿ ಪೆವಿಲಿಯನ್ ಸೇರಿದರು. ನಾಲ್ಕನೇ ವಿಕೆಟ್‌ಗೆ ಎಲ್ಸೆ ವಿಲ್ಲಾನಿ ಮತ್ತು ಮೆಗ್ ಲ್ಯಾನಿಂಗ್ ತಂಡವನ್ನು ಆಧರಿಸಿ 139 ರನ್‌ಗಳ ಜೊತೆಯಾಟ ನೀಡಿದರು. ಇವರ ಬ್ಯಾಟಿಂಗ್ ನೆರವಿನಲ್ಲಿ ಆಸ್ಟ್ರೇಲಿಯದ ಸ್ಕೋರ್ 200ರ ಗಡಿ ದಾಟಿತು. ವಿಲ್ಲಾನಿ 19.3ನೇ ಓವರ್‌ನಲ್ಲಿ ರನೌಟಾದರು. ಅವರು ಔಟಾಗುವ ಮೊದಲು 51 ರನ್(30ಎ, 8ಬೌ) ಅಮೂಲ್ಯ ಕೊಡುಗೆ ನೀಡಿದರು. ಕೊನೆಯ 10 ಓವರ್‌ಗಳಲ್ಲ್ಲಿ ಆಸ್ಟ್ರೇಲಿಯದ ಖಾತೆಗೆ 139 ರನ್ ಸೇರ್ಪಡೆಗೊಂಡಿತು.

ಲ್ಯಾನಿಂಗ್ 45 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 88 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂಗ್ಲೆಂಡ್‌ನ ಜೆನಿ ಗುನ್ 38ಕ್ಕೆ 2 ಮತ್ತು ಫಾರಂಟ್ 44ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News