ಶಿರಾಡಿ ಘಾಟ್‍ ನಲ್ಲಿ ಮೇ ಅಂತ್ಯಕ್ಕೆ ವಾಹನ ಸಂಚಾರ ಪ್ರಾರಂಭ ಸಾಧ್ಯತೆ

Update: 2018-04-01 17:55 GMT

ಸಕಲೇಶಪುರ,ಎ.03: ಶಿರಾಡಿ ಘಾಟ್‍ನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟೀಕರಣ ಕಾಮಗಾರಿ ವೇಗದಿಂದ ಸಾಗುತ್ತಿದ್ದು, ಮೇ ಅಂತ್ಯದಲ್ಲಿ ವಾಹನ ಸಂಚಾರ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ.

ಜನವರಿಯಿಂದ ಈ ಮಾರ್ಗ ಬಂದ್ ಆದ ನಂತರ ಕಾಮಗಾರಿ ಯಾವ ಹಂತದಲ್ಲಿದೆ, ಗುತ್ತಿಗೆದಾರರು ವಿಳಂಭ ಮಾಡುತ್ತಿದ್ದಾರೋ? ಕಾಮಗಾರಿ ಗುಣಮಟ್ಟ ಹೇಗಿದೆ? ಸಂಚಾರ ಯಾವಾಗ ಪ್ರಾರಂಭವಾಗುತ್ತದೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. 

ಇತ್ತೀಚೆಗೆ ಜರ್ಮನಿಯಿಂದ ಗುತ್ತಿಗೆದಾರ ಕಂಪನಿ ಖರೀದಿ ಮಾಡಿರುವ ಅತ್ಯಾಧುನಿಕ ಯಂತ್ರದಿಂದ ಪ್ರತಿ ದಿನ ಸುಮಾರು 700 ಮೀಟರ್ ಪಿಕ್ಯೂಸಿ ಕಾಮಗಾರಿ ಮಾಡಲಾಗುತ್ತಿದೆ. ವರ್ಷದ 6 ತಿಂಗಳು ಶಿರಾಡಿಯಲ್ಲಿ ನಿರಂತರ ಮಳೆ ಬೀಳುತ್ತದೆ. ಇಲ್ಲಿಯ ಮಣ್ಣು ಮೃದು ರಸ್ತೆಯಲ್ಲಿಯೇ ನೀರು ಉಕ್ಕುತ್ತದೆ. ಆದ್ದರಿಂದ ವಿಶೇಷ ತಂತ್ರಜ್ಞಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. 

ಕಾಮಗಾರಿಯ ಗುತ್ತಿಗೆ ಪಡೆದಿರುವ ಓಷನ್ ಕನ್ಟ್ರಕ್ಷನ್ ಕಂಪನಿಯ ಎಂಜಿನಿಯರ್ ಶರ್ಫುದ್ದೀನ್ ಪತ್ರಿಕೆಯೊಂದಿಗೆ ಮತನಾಡಿ, ಇದೊಂದು ಮಹತ್ವದ ಹೆದ್ದಾರಿ ಆಗಿರುವುದರಿಂದ ಕಾಮಗಾರಿಯ ವೇಗ ಹೆಚ್ಚು ಮಾಡಲಾಗಿದೆ. ಸರ್ಕಾರ ನೀಡಿರುವ ಗಡುವಿಗೂ ಮುನ್ನವೇ ಅಂದರೆ ಮೇ ಅಂತ್ಯದೊಳಗೆ ಕಾಮಗಾರಿ ಮುಗಿದು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಹವಾಮಾನ ಸಹಕರಿಸದಿದ್ದರೆ ಕೆಲಸ ಕಷ್ಟ. ಆಗ ಜನವರಿಯಲ್ಲಿ ಕಾಮಗಾರಿ ಅಂತ್ಯಗೊಳಿಸಲಾಗುವುದು ಎಂದರು.

                     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News