ಆಳವಾದ ಪ್ರೇಮಸಂಬಂಧದ ಲೈಂಗಿಕ ಸಂಪರ್ಕ ಅತ್ಯಾಚಾರವಲ್ಲ : ಮುಂಬೈ ಹೈಕೋರ್ಟ್‌

Update: 2018-04-02 05:58 GMT

ಪಣಜಿ, ಎ. 2: ಆಳವಾದ ಪ್ರೇಮಸಂಬಂಧವಿದ್ದು, ಪರಸ್ಪರ ಲೈಂಗಿಕ ಸಂಪರ್ಕ ಹೊಂದಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ ಎಂದು ಮುಂಬೈ ಹೈಕೋರ್ಟ್‌ನ ಗೋವಾ ಶಾಖೆ ಅಭಿಪ್ರಾಯಪಟ್ಟಿದೆ.

ಇಬ್ಬರ ನಡುವೆ ಪ್ರೇಮಸಂಬಂಧ ಇದ್ದುದನ್ನು ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಅಂಶವನ್ನು ತಪ್ಪಾಗಿ ವಿಶ್ಲೇಷಿಸಿ, ಆ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಏಳು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

2013ರಲ್ಲಿ ಕ್ಯಾಸಿನೊ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಚೆಫ್ ಆಗಿದ್ದ ಯೋಗೀಶ್ ಪಾಳೇಕರ್, ಆ ಮಹಿಳೆಯನ್ನು ಕರೆದೊಯ್ದು ಕುಟುಂಬಕ್ಕೆ ಪರಿಚಯಿಸಿದ. ನಂತರ ಕುಟುಂಬದ ಯಾರೂ ಇಲ್ಲದ ಕಾರಣ ಆಕೆ ರಾತ್ರಿ ಯೋಗೀಶ್ ಜತೆಗೇ ತಂಗಿದಳು. ಲೈಂಗಿಕ ಸಂಬಂಧದ ಬಳಿಕ ಮಹಿಳೆ ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದಳು.

ರಾತ್ರಿ ಲೈಂಗಿಕ ಸಂಬಂಧ ಹೊಂದಿದ ಆಕೆಯನ್ನು ಮರುದಿನ ಮನೆಗೆ ಕಳುಹಿಸಿದ್ದ. ಆ ಬಳಿಕ ಕೂಡಾ 3-4 ಬಾರಿ ಇಬ್ಬರೂ ಲೈಂಗಿಕ ಸಂಪರ್ಕ ಸಾಧಿಸಿದ್ದರು. ಆದರೆ ಆಕೆ ಕೆಳ ಜಾತಿಯವಳು ಎಂಬ ಕಾರಣಕ್ಕೆ ಆಕೆಯನ್ನು ವಿವಾಹವಾಗಲು ಆತ ನಿರಾಕರಿಸಿದ. ಆಗ ಪಾಳೇಕರ್ ವಿರುದ್ಧ ಮಹಿಳೆ ಅತ್ಯಾಚಾರದ ದೂರು ನೀಡಿದಳು. ಆತ ವಿವಾಹವಾಗುವುದಾಗಿ ನಂಬಿಸಿದ್ದರಿಂದ ಲೈಂಗಿಕ ಚಟುವಟಿಕೆಗೆ ಒಪ್ಪಿದ್ದಾಗಿ ಹೇಳಿದ್ದರು.

"ಕೇವಲ ವಿವಾಹವಾಗುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಹಿಳೆ ಒಪ್ಪಿಗೆ ನೀಡಿಲ್ಲ. ಬದಲಾಗಿ ಇಬ್ಬರ ನಡುವೆ ಆಳವಾದ ಪ್ರೇಮಸಂಬಂಧವಿತ್ತು. ಇದಾದ ಬಳಿಕ ಕೂಡಾ ಇವರ ಸಂಬಂಧ ಮುಂದುವರಿದಿತ್ತು. ಮೇಲ್ಮನವಿದಾರನಿಗೆ ಹಲವು ಬಾರಿ ಮಹಿಳೆ ಹಣಕಾಸು ನೆರವು ಕೂಡಾ ನೀಡಿದ್ದಳು. ಮೂರು ನಾಲ್ಕು ಬಾರಿ ಇಬ್ಬರೂ ಸೇರಿದ್ದರು. ಆದ್ದರಿಂದ ಇದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು" ಎಂದು ನ್ಯಾಯಮೂರ್ತಿ ಸಿ.ವಿ.ಭದಂಗ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News