ಕೇಂದ್ರ ಸರಕಾರದ ವಿರುದ್ಧ ಮತ್ತೆ ಕಿಡಿಕಾರಿದ ಬಿಜೆಪಿ ಸಂಸದೆ ಸಾವಿತ್ರಿ ಫುಲೆ

Update: 2018-04-02 08:17 GMT

ಲಕ್ನೋ,ಎ.2 : ಮೀಸಲಾತಿ ವಿಚಾರದಲ್ಲಿ  ಕೇಂದ್ರದ ತಮ್ಮದೇ ಸರಕಾರದ ವಿರುದ್ಧ  ಬಹ್ರೈಚ್ ನ ಬಿಜೆಪಿ ದಲಿತ ಸಂಸದೆ ಸಾವಿತ್ರಿ ಬಾಯಿ ಫುಳೆ ಕಿಡಿ ಕಾರಿದ್ದಾರೆ. ಲಕ್ನೋದಲ್ಲಿ ಬೃಹತ್ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಫುಳೆ, ಇತ್ತೀಚೆಗೆ  ಅಂಬೇಡ್ಕರ್ ಪ್ರತಿಮೆಗಳನ್ನು ಭಗ್ನಗೈದ  ಘಟನೆಗಳ ಬಗ್ಗೆಯೂ ತಮ್ಮ  ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೆ ತಮ್ಮ ಸಮುದಾಯದ ವಿರುದ್ಧ ನಡೆಯುವ ಅಪರಾಧಗಳೂ ಹೆಚ್ಚಾಗಿವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ತನ್ನ ಮಾತುಗಳ ಪರಿಣಾಮದ ಬಗ್ಗೆ ತನಗೆ ಭಯವಿಲ್ಲ ಎಂದ ಫುಳೆ, ಭಾರತೀಯ ಸಂವಿಧಾನದ ಅನುಸಾರವಾಗಿ ಮೀಸಲಾತಿ ಜಾರಿಗೊಳ್ಳುವಂತೆ ನೋಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ.

“ಕೆಲವು ಬಾರಿ ಅವರು ಸಂವಿಧಾನವನ್ನು ಪರಿಶೀಲಿಸುವುದಾಗಿ ಹೇಳುತ್ತಾರೆ ಹಾಗೂ ಮೀಸಲಾತಿ ಅಂತ್ಯಗೊಳಿಸುವುದಾಗಿ ಹೇಳುತ್ತಾರೆ. ನಾನು ಸಂಸದೆಯಾಗಿ ಮುಂದುವರಿದರೂ ಮುಂದುವರಿಯದೇ ಇದ್ದರೂ ಸಂವಿಧಾನ ಬದಲಾಗದಂತೆ ನಾನು ನೋಡಿಕೊಳ್ಳುತ್ತೇನೆ. ಮೀಸಲಾತಿ ಜಾರಿಗೊಳ್ಳುವಂತೆ ನೋಡಿಕೊಳ್ಳುತ್ತೇನೆ,'' ಎಂದು ಆರಕ್ಷಣ್ ಬಚಾವೋ ಮಹಾ ರ್ಯಾಲಿಯನ್ನುದ್ದೇಶಿಸಿ ಅವರು ಹೇಳಿದರು.

ಸಭೆಯಲ್ಲಿ ಭಾಗವಹಿಸಿದವರು “ದೀದಿ ತುಮ್ ಸಂಘರ್ಷ್ ಕರೋ, ಹಮ್ ತುಮ್ಹಾರೆ ಸಾಥ್ ಹೈ,'' ಎಂಬ ಘೋಷಣೆಗಳನ್ನು ಕೂಗಿ ಆಕೆಯನ್ನು ಹುರಿದುಂಬಿಸಿದರು.

ದಲಿತರ ವಿರುದ್ಧ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆಯೂ ಕಿಡಿ ಕಾರಿದ ಆಕೆ “ನಮ್ಮ ಸಮುದಾಯದ ಮಂದಿ ಇಂದಿಗೂ ಕಷ್ಟ ಎದುರಿಸುತ್ತಿದ್ದಾರೆ. ಅವರಿಗೇಕೆ ಗೌರವ ಸಿಗುತ್ತಿಲ್ಲ?,'' ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಭಗ್ನಗೊಳಿಸುವುದು ದೇಶದ ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ಹೇಳಿದ ಅವರು “ನನ್ನನ್ನು ಹೂಳಲು ಒಂದು ತುಂಡು ಜಾಗ ದೊರೆಯದೇ ಇದ್ದರೂ ಸರಿ ನಾನು ದಲಿತರಿಗಾಗಿ ಹೋರಾಟವನ್ನು ನಿಲ್ಲಿಸುವುದಿಲ್ಲ” ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News