ಭಾರತ ತಲುಪಿದ ಮೊಸುಲ್ ನಲ್ಲಿ ಮೃತಪಟ್ಟ 38 ಭಾರತೀಯರ ಮೃತದೇಹ

Update: 2018-04-02 13:59 GMT

ಅಮೃತಸರ, ಎ.2: ಇರಾಕ್‌ನ ಮೊಸುಲ್‌ನಲ್ಲಿ ಐಸಿಸ್ ಉಗ್ರರಿಂದ ಹತ್ಯೆಗೀಡಾದ 39 ಭಾರತೀಯರ ಪೈಕಿ 38 ಮಂದಿಯ ಮೃತದೇಹಗಳನ್ನು ಹೊತ್ತ ವಿಶೇಷ ವಿಮಾನವು ಅಮೃತಸದಲ್ಲಿ ಬಂದಿಳಿದಿದೆ ಎಂದು ಸೋಮವಾರದಂದು ಸರಕಾರಿ ಮೂಲಗಳು ತಿಳಿಸಿವೆ. ಮೃತದೇಹಗಳನ್ನು ವಾಪಸ್ ತರಲು ರವಿವಾರದಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ಭಾರತೀಯ ವಾಯುಪಡೆಯ ವಿಮಾನದಲ್ಲಿ ಮೊಸುಲ್‌ಗೆ ತೆರಳಿದ್ದರು.

ಹತ್ಯೆಗೀಡಾದವರ ಪೈಕಿ ಬಹುತೇಕರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು 27 ಮಂದಿ ಪಂಜಾಬ್‌ನವರಾಗಿದ್ದರೆ, ನಾಲ್ಕು ಮಂದಿ ಬಿಹಾರ ಮೂಲದವರಾಗಿದ್ದರು. ಮಡಿದವರನ್ನು ಪತ್ತೆಹಚ್ಚಿ ಮೃತದೇಹಗಳನ್ನು ಸ್ವದೇಶಕ್ಕೆ ತರಲು ನೆರವು ನೀಡಿದ ಇರಾಕ್ ಸರಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ. ನಾಪತ್ತೆಯಾದ ಭಾರತೀಯರ ಬಗ್ಗೆ ತಿಳಿಯಲು ಭಾರತ ಸರಕಾರವು ಸಾಮರ್ಥ್ಯ ಮೀರಿ ಶ್ರಮಪಟ್ಟಿದೆ. 39 ಮೃತದೇಹಗಳ ಪೈಕಿ ಒಂದು ಮೃತದೇಹದ ಪರಿಶೀಲನೆ ಬಾಕಿಯುಳಿದಿರುವ ಕಾರಣ 38 ಮೃತದೇಹಗಳನ್ನು ಭಾರತಕ್ಕೆ ತರಲಾಗಿದೆ ಎಂದು ಜನರಲ್ ಸಿಂಗ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇರಾಕ್‌ನಲ್ಲಿ 2014ರ ಜೂನ್‌ನಿಂದ ನಾಪತ್ತೆಯಾಗಿದ್ದ 39 ಭಾರತೀಯರನ್ನು ಹತ್ಯೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮಾರ್ಚ್ 20ರಂದು ಸಂಸತ್‌ಗೆ ತಿಳಿಸಿದ್ದರು. ನಾಪತ್ತೆಯಾದ ಭಾರತೀಯರ ಪತ್ತೆಗೆ ತೆರಳಿದ್ದ ಜನರಲ್ ವಿ.ಕೆ ಸಿಂಗ್ ಹಾಗೂ ತಂಡಕ್ಕೆ ಸ್ಥಳೀಯರು ಮೊಸುಲ್‌ನಿಂದ 25 ಕಿ.ಮೀ ದೂರದಲ್ಲಿ ದಿಬ್ಬವೊಂದಿದ್ದು, ಅದರಲ್ಲಿ ಹಲವು ದೇಹಗಳನ್ನು ಹೂತಿಟ್ಟಂತೆ ಭಾಸವಾಗುತ್ತದೆ ಎಂದು ತಿಳಿಸಿದ್ದರು. ಈ ಮಾಹಿತಿಯ ಪ್ರಕಾರ ದಿಬ್ಬವನ್ನು ಅಗೆದಾಗ ಅದರಲ್ಲಿ 39 ಮೃತದೇಹಗಳು ಪತ್ತೆಯಾಗಿದ್ದವು. ಈ ಮೃತದೇಹಗಳ ಲಕ್ಷಣಗಳು, ಉದ್ದನೆಯ ಕೂದಲು, ಸಿಖ್ ಕಡ (ಬಳೆ), ಇರಾಕಿಯೇತರ ಶೂಗಳು ಮತ್ತು ಗುರುತಿನಚೀಟಿಗಳು ಸಿಖ್ಖರನ್ನು ಹೋಲುತ್ತಿತ್ತು. ಮೃತದೇಹಗಳನ್ನು ಹೊರತೆಗೆದು ಬಗ್ದಾದ್‌ಗೆ ಕಳುಹಿಸಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಅವುಗಳು ಭಾರತೀಯರ ಮೃತದೇಹಗಳು ಎಂಬುದು ದೃಢಪಟ್ಟಿತ್ತು ಎಂದು ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News