ಭಾರತ್ ಬಂದ್: ಉತ್ತರ ಭಾರತದಲ್ಲಿ ತೀವ್ರ ಹಿಂಸಾಚಾರ,7 ಜನರ ಸಾವು

Update: 2018-04-02 13:44 GMT

ಹೊಸದಿಲ್ಲಿ,ಎ.2: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಸಂದರ್ಭದಲ್ಲಿ ಉತ್ತರ ಭಾರತದಾದ್ಯಂತ ಭಾರೀ ಪ್ರತಿಭಟನೆಗಳು ಭುಗಿಲೆದ್ದಿವೆ. ಮಧ್ಯಪ್ರದೇಶದಲ್ಲಿ ಘರ್ಷಣೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ರಾಜಸ್ಥಾನದ ಆಲ್ವಾರ್‌ನಲ್ಲಿ ಗುಂಡೇಟಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.

ಪಂಜಾಬ್, ರಾಜಸ್ಥಾನ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆದಿರುವುದು ವರದಿಯಾಗಿದೆ. ಪಂಜಾಬ್‌ನಲ್ಲಿ ಜನಜೀವನ ಸಂಪೂರ್ಣ ವಾಗಿ ಸ್ಥಗಿತಗೊಂಡಿದ್ದು, ಸಾರಿಗೆ ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ಅಲ್ಲಿ ರಾಜ್ಯ ಸರಕಾರವು ಸೇನೆ ಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವು ಸಮುದಾಯದ ರಕ್ಷಣೆಗಾಗಿರುವ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಿದೆಯೆಂದು ಆರೋಪಿಸಿ ದಲಿತರು ಅದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ತನ್ಮಧ್ಯೆ ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ.

ಮಧ್ಯಪ್ರದೇಶದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಭವಿಸಿದ ಘರ್ಷಣೆಗಳಲ್ಲಿ ಓರ್ವ ವಿದ್ಯಾರ್ಥಿ ನಾಯಕ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ. ಬಿಂಧ್ ಜಿಲ್ಲೆಯಲ್ಲಿ ಹಿಂಸಾಚಾರದಿಂದ ಆರು ಜನರು ಗಾಯ ಗೊಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯನ್ನು ಕರೆಸಲಾಗಿದೆ. ಗ್ವಾಲಿಯರ್‌ನಲ್ಲಿ ಪ್ರತಿಭಟನಾಕಾರರು ರೈಲುಗಳಿಗೆ ತಡೆಯೊಡ್ಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಜನರು ಗುಂಪು ಸೇರುವುದನ್ನು ತಡೆಯಲು ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಜೈಪುರ, ಬಾರ್ಮೇರ್ ಮತ್ತು ಆಲ್ವಾರ್ ಸೇರಿದಂತೆ ರಾಜಸ್ಥಾನದ ವಿವಿಧೆಡೆಗಳಲ್ಲಿ ಘರ್ಷಣೆಗಳು ಮತ್ತು ಅಂಗಡಿ-ಮುಂಗಟ್ಟುಗಳು, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಜಾರ್ಖಂಡ್‌ನ ರಾಜಧಾನಿ ರಾಂಚಿ ಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಪ್ರತಿಭಟನಾಕಾರರು ರೈಲ್ವೆಹಳಿಗಳ ಮೇಲೆ ತಡೆಯೊಡ್ಡಿದ್ದರಿಂದ ಬಿಹಾರ, ಒಡಿಶಾ, ಪಂಜಾಬ್ ಮತ್ತು ರಾಜಸ್ಥಾನಗಳ ವಿವಿಧೆಡೆಗಳಲ್ಲಿ ರೈಲುಗಳ ಸಂಚಾರ ವ್ಯತ್ಯಯಗೊಂಡಿತ್ತು. ಕೆಲವು ಪ್ರದೇಶಗಳಲ್ಲಿ ಹೆದ್ದಾರಿಗಳಲ್ಲೂ ತಡೆಗಳನ್ನೊಡ್ಡಲಾಗಿತ್ತು.

ಪಂಜಾಬ್‌ನ ಜಲಂಧರ್, ಅಮೃತಸರ ಮತ್ತು ಬಠಿಂಡಾಗಳಲ್ಲಿ ಖಡ್ಗಗಳು, ದೊಣ್ಣೆಗಳು, ಬೇಸ್‌ಬಾಲ್ ಬ್ಯಾಟ್‌ಗಳು ಮತ್ತು ಧ್ವಜಗಳನ್ನು ಹಿಡಿದುಕೊಂಡು ಬೀದಿಗಿಳಿದಿದ್ದ ನೂರಾರು ಪ್ರತಿಭಟನಾಕಾರರು ಬಲವಂತದಿಂದ ಅಂಗಡಿ-ಮುಂಗಟ್ಟು ಗಳನ್ನು ಮುಚ್ಚಿಸಿದರು. ಪ್ರತಿಭಟನಾಕಾರರು ಹೆದ್ದಾರಿಗಳು ಮತ್ತು ಉಪರಸ್ತೆಗಳಲ್ಲಿ ತಡೆಗಳನ್ನೊಡ್ಡಿದ್ದರಿಂದ ಚಂಡಿಗಡದಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ವುಂಟಾಗಿತ್ತು.

ಪಂಜಾಬ್ ಸರಕಾರವು ವ್ಯಾಪಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಶಾಲಾಕಾಲೇಜುಗಳನ್ನು ಮುಚ್ಚಲಾಗಿತ್ತು. ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮೊಬೈಲ್ ಅಂತರ್ಜಾಲ ಸೇವೆಗಳನ್ನು ಅಮಾನತುಗೊಳಿಸಲಾಗಿತ್ತು. ಬ್ಯಾಂಕುಗಳು ಮತ್ತು ಕಚೇರಿಗಳೂ ಬಾಗಿಲೆಳೆದುಕೊಂಡಿದ್ದು, ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಜಲಂಧರ, ಕಪೂರ್ತಲಾ, ನವಾಂಶಹರ್ ಮತ್ತು ಹೋಷಿಯಾರಪುರದಂತಹ ನಗರಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಮುಷ್ಕರದ ನಿರ್ಧಾರವನು ಕಟುವಾಗಿ ಟೀಕಿಸಿದ ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ್ ಅವರು, ಸರಕಾರವು ಈ ಹಿಂದೆಂದೂ ಯಾವುದೇ ವಿಷಯದಲ್ಲಿ ಇಷ್ಟೊಂದು ಚುರುಕಾಗಿ ಕ್ರಮವನ್ನು ಕೈಗೊಂಡಿರಲಿಲ್ಲ. ಈ ವಿಷಯದಲ್ಲಿ ಪಕ್ಷಗಳೇಕೆ ರಾಜಕೀಯವನ್ನು ನಡೆಸುತ್ತಿವೆ ಎಂದು ಪ್ರಶ್ನಿಸಿದರು.

ಬಿಹಾರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮುಷ್ಕರವನ್ನು ಬೆಂಬಲಿಸಿದೆ. ರಾಜಧಾನಿ ಪಟ್ನಾದಲ್ಲಿ ಭೀಮ್ ಆರ್ಮಿಯ ನೂರಾರು ಕಾರ್ಯಕರ್ತರು ಬೀದಿಗಿಳಿದು ಅಂಗಡಿ-ಮುಂಗಟ್ಟುಗಳನ್ನು ಬಲವಂತದಿಂದ ಮುಚ್ಚಿಸಿದರು.

ಹರ್ಯಾಣದ ವಿವಿಧೆಡೆಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲೂ ಪ್ರತಿಭಟನೆಗಳು ನಡೆದಿವೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ತೀವ್ರ ಹಿಂಸಾಚಾರ ನಡೆದಿದ್ದು, ಬೆಂಕಿ ಹಚ್ಚುವಿಕೆ ಮತು ಪೊಲೀಸರೊಂದಿಗೆ ಘರ್ಷಣೆಗಳ ಘಟನೆಗಳು ವರದಿಯಾಗಿವೆ. ಹಾಪುರದಲ್ಲಿ ಹೆದ್ದಾರಿ ತಡೆಯನ್ನು ನಡೆಸಲಾಗಿತ್ತು. ಮೊರೆನಾದಲ್ಲಿ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಶಾಂತಿಯನ್ನು ಕಾಯ್ದಕೊಳ್ಳುವಂತೆ ಜನತೆಯನ್ನು ಕೋರಿಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದ ಜಾತಿಗಳು, ಎಸ್‌ಸಿ/ಎಸ್‌ಟಿಗಳ ಕಲ್ಯಾಣಕ್ಕೆ ಬದ್ಧವಾಗಿವೆ ಎಂದು ಹೇಳಿದ್ದಾರೆ.

 ಸರ್ವೋಚ್ಚ ನ್ಯಾಯಾಲಯವು ತನ್ನ ಮಾ.20ರ ಆದೇಶದಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಿತ್ತು. ಅದು ಆರೋಪಿಗಳ ತಕ್ಷಣ ಬಂಧನಕ್ಕೆ ತಡೆಯೊಡ್ಡುವುದರೊಂದಿಗೆ ಜಾಮೀನಿಗೆ ಅವಕಾಶ ಕಲ್ಪಿಸಿದೆ. ಇದು ಕಾಯ್ದೆಯನ್ನು ದುರ್ಬಲಗೊಳಿಸಿದೆ ಎನ್ನುವುದು ದಲಿತ ಗುಂಪುಗಳ ಪ್ರತಿಪಾದನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News