ಜಿಂಕೆಗಳ ಪರಿಸ್ಥಿತಿ ಬಂದೀತು?

Update: 2018-04-02 18:38 GMT

ಮಾನ್ಯರೇ,

ಕಾಡಿನಲ್ಲಿ ನೀಳವಾದ ವಕ್ರ ಕೊಂಬುಗಳಿರುವ ಜಿಂಕೆಗಳು ಪರಸ್ಪರ ಜಗಳವಾಡುತ್ತಿರುವಾಗ ಕೊಂಬುಗಳು ಹೆಣೆದುಕೊಂಡು ಓಡಲಾರದೆ ಹುಲಿ ಚಿರತೆಗಳಿಗೆ ಆಹಾರವಾಗುತ್ತವೆ. ಎಡಪಂಥೀಯರು, ಜಾತ್ಯತೀತ ರಾಜಕೀಯ ಮುಖಂಡರು ಹಾಗೂ ಪ್ರಗತಿಪರ ಬರಹಗಾರರದೂ ಇದೇ ಕಥೆಯಾಗಿದೆ. ಕೆಲವು ದಿನಗಳ ಹಿಂದೆ ಆನಂದ್ ತೇಲ್ತುಂಬ್ಡೆ ಅವರ ಬರಹ ಆಧರಿಸಿ ಅವರನ್ನು ಅಂಬೇಡ್ಕರ್‌ರ ವಿರೋಧಿ ಎಂದು ದೂರಲಾಯಿತು. ಇದೀಗ ರಾಮಚಂದ್ರ ಗುಹಾ ಅವರ ಮೇಲೆ ಕಮ್ಯುನಿಸ್ಟರು, ಕೆಲವು ಪ್ರಗತಿಪರರು ಕೂಡ ಮುಗಿಬೀಳುತ್ತಿದ್ದಾರೆ.

ಯಾವುದೋ ದೇಶದ, ಯಾವುದೋ ಕಾಲದ ಲೆನಿನ್-ಸ್ಟಾಲಿನ್ -ಮುಸೋಲಿನಿ ಅವರ ಕುರಿತು ಪರ ವಿರೋಧಿ ಚರ್ಚೆ ಮಾಡಲು ನಮಗೀಗ ಸಮಯ ಇದೆಯೇ? ನನ್ನಂಥ ಬಡ ಭಾರತೀಯಳಿಗೆ ಕೋಮು ದ್ವೇಷವಿಲ್ಲದ ಸಾಮಾಜಿಕ ಹಾಗೂ ಪರಿಸರದ ಕಾಳಜಿಯುಳ್ಳ, ಎಲ್ಲಾ ವಯಸ್ಸಿನವರೂ ಬದುಕುವುದಕ್ಕೆ ಸಮಾನ ಗೌರವಯುತ ವ್ಯವಸ್ಥೆ ಕಟ್ಟುವ ಸರಕಾರವೊಂದರ ಅಗತ್ಯವಿದೆಯಷ್ಟೇ? ಆನಂದ್ ತೇಲ್ತುಂಬ್ಡೆಯವರಾಗಲಿ, ಗುಹಾ ಅವರಾಗಲಿ ದಶಕಗಳಿಂದ ಕೋಮುವಾದಿ ಪಕ್ಷವನ್ನು, ಕೇಸರಿ ಪತಾಕೆಗಳನ್ನು ನಖಶಿಖಾಂತ ವಿರೋಧಿಸುತ್ತಾ ಬಂದಿದ್ದಾರೆ.

ಕರ್ನಾಟಕದಲ್ಲಿ ದೇವೇಗೌಡರು, ಸಿದ್ದರಾಮಯ್ಯನವರು ಇತರೆಲ್ಲ ದೌರ್ಬಲ್ಯಗಳ ಹೊರತಾಗಿಯೂ ಮಹಾ ಮುತ್ಸದ್ದಿಗಳು ಮತ್ತು ಜಾತ್ಯತೀತರು. ವಿಶ್ವನಾಥ್, ಶ್ರೀನಿವಾಸ್ ಪ್ರಸಾದರು ಕೂಡ. ಇವರೆಲ್ಲ ಸ್ವಪ್ರತಿಷ್ಠೆ, ಅಧಿಕಾರ ಲಾಲಸೆ, ಪುತ್ರ ವ್ಯಾಮೋಹಗಳಿಂದ ಕಿತ್ತಾಡುತ್ತಾ ಕೋಮುವಾದಿಗಳಿಗೆ ಆಹ್ವಾನ ನೀಡುತ್ತಿದ್ದಾರೆ.

ವ್ಯತ್ಯಾಸ ಎಂದರೆ ಕೊಂಬು ಸಿಕ್ಕಿಕೊಂಡ ಜಿಂಕೆಗಳು ತಾವೇ ಹುಲಿ ಚಿರತೆಗಳಿಗೆ ಆಹಾರ ಆಗುತ್ತವೆಯಾದರೆ ಈ ಎಡಪಂಥೀಯರು, ಬುದ್ಧಿಜೀವಿಗಳು, ಮುತ್ಸದ್ದಿಗಳು ನಮ್ಮನ್ನು ಕೋಮುವಾದಿಗಳ, ಬಂಡವಾಳಶಾಹಿಗಳ ಬಾಯಿಗೆ ತಳ್ಳುತ್ತಿದ್ದಾರೆ.

ಗೌರಿ ಅವರಂಥ ಜಾತ್ಯತೀತ ಮೌಲ್ಯಗಳ ಜೀವಂತ ಮೂರ್ತಿಗಳನ್ನು ಕೇಸರಿ ಪರಿವಾರಗಳು ನೆಲಕ್ಕುರುಳಿಸದಂತಹ ವಾತಾವರಣ ನಿರ್ಮಾಣಕ್ಕೆ ನಮಗೆ ಗುಹಾ, ತೇಲ್ತುಂಬ್ಡೆ, ಗೌಡರು, ಸಿದ್ದರಾಮಯ್ಯ, ಮಮತಾ, ಮಾಯಾವತಿ ಪಿಣರಾಯಿ ಎಲ್ಲರೂ ಬೇಕು. ತಲೆ ಹೋಗುತ್ತಿದೆ ಸ್ವಾಮಿ... ಕೂದಲಿಗಾಗಿ ಅಳುತ್ತೀರಲ್ಲ?

Writer - -ಕಸ್ತೂರಿ, ತುಮಕೂರು

contributor

Editor - -ಕಸ್ತೂರಿ, ತುಮಕೂರು

contributor

Similar News