ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಚಾರ್ಜ್ ಶೀಟ್: ಸಂಸದ ಧ್ರುವನಾರಾಯಣ್

Update: 2018-04-03 06:46 GMT

ಬೆಂಗಳೂರು, ಎ.3: ಬಿಜೆಪಿಯವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಆಡಳಿತದ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್‌ನ ಹಿರಿಯ ಸಂಸದ ಡಿ.ಧ್ರುವನಾರಾಯಣ್ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆ ಮತ್ತು ರೈತರು ಆತ್ಮಹತ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಬಿಜೆಪಿಯವರು ಕಾಂಗ್ರೆಸ್ ಆಡಳಿತದ ವಿರುದ್ಧ ಆರೋಪ ಪಟ್ಟಿ ಬಿಡುಗಡೆ (ಚಾರ್ಜ್ ಶೀಟ್) ಮಾಡಿದ್ದಾರೆ. ಆದರೆ ಅದು ಆಧಾರ ರಹಿತ, ಅವಾಸ್ತವ ಮತ್ತು ಅಸಂಬದ್ಧವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಹೆಸರಿನಲ್ಲಿ, ಅಪರಾಧ ಹೆಚ್ಚಳ ಹೆಸರಿನಲ್ಲಿ ಮತ್ತು ರೈತರ ಆತ್ಮಹತ್ಯೆ ವಿಚಾರವಾಗಿ ಆರೋಪ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಎನ್‌ಸಿಆರ್‌ಬಿ ( ನ್ಯಾಷನಲ್ ಕ್ರೈಂ ಬ್ಯೂರೋ)ದ 2016ರ ವರದಿ ಪ್ರಕಟವಾಗಿದ್ದು, ಇದರ ಪ್ರಕಾರ ಅಪರಾಧಗಳು ಹೆಚ್ಚಾಗಿರುವುದು ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ರಾಜಸ್ತಾನ ಮತ್ತು ಬಿಹಾರ ರಾಜ್ಯಗಳಲ್ಲಿ. ಆದ್ದರಿಂದ ಬಿಜೆಪಿಯವರು ಆರೋಪ ಪಟ್ಟಿ ಹೆಸರಿನಲ್ಲಿ ಇಲ್ಲಸಲ್ಲದ ಆರೋಪ ಮಾಡುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಇನ್ನು ರೈತರು ಆತ್ಮಹತ್ಯೆ ವಿಚಾರವನ್ನು ಬಿಜೆಪಿಯವರು ಪ್ರಸ್ತಾಪಿಸಿದ್ದಾರೆ. ನಮ್ಮ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಲಕ್ಷಾಂತರ ರೈತರ ಸಾಲ ಮನ್ನಾ ಮಾಡಿದೆ. ಅದೇರೀತಿ ರೈತರ ಸಂಕಷ್ಟ ನಿವಾರಿಸುವ ಹೊಣೆ ಹೊತ್ತ ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿತ್ತು. ಆದರೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ರೈತರ ನೋವು ನಿವಾರಿಸಲು ಮುಂದಾಗಲಿಲ್ಲ. ಆದ್ದರಿಂದ ಬಿಜೆಪಿಯವರಿಗೆ ರೈತರ ಪರವಾಗಿ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಧ್ರುವನಾರಾಯಣ ಟೀಕಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿರುವ 5 ವರ್ಷಗಳ ಅವಧಿಯಲ್ಲಿ ಯಾವುದೇ ಹಗರಣ, ಅಕ್ರಮ, ಅವ್ಯವಹಾರಗಳು ನಡೆದಿಲ್ಲ. ಅದೇ ಬಿಜೆಪಿ ಆಡಳಿತದಲ್ಲಿ ಹಗರಣಗಳು, ಅಕ್ರಮಗಳು ಲೆಕ್ಕವೇ ಇಲ್ಲದಂತಾಗಿತ್ತು. ಅಷ್ಟೇ ಏಕೆ? ಮುಖ್ಯಮಂತ್ರಿಯಾದಿಯಾಗಿ 6ಕ್ಕೂ ಅಧಿಕ ಸಚಿವರು ಜೈಲಿಗೆ ಹೋಗಿದ್ದರು. ಇದೆಲ್ಲ ಜನರಿಗೆ ಗೊತ್ತಿದೆ. ಆದರೂ ಬಿಜೆಪಿ ದಾಖಲೆ ಇಲ್ಲದೆ, ಅಂಕಿಅಂಶಗಳನ್ನು ತಿಳಿಯದೆ ಏಕಾಏಕಿ ಆರೋಪ ಪಟ್ಟಿ ಬಿಡುಗಡೆ ಮಾಡಿ ನಗೆಪಾಟಲಿಗೆ ಸಿಲುಕಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News