ಮೊಸುಲ್ ನಲ್ಲಿ ಮೃತಪಟ್ಟ ಭಾರತೀಯರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

Update: 2018-04-03 14:47 GMT

ಹೊಸದಿಲ್ಲಿ, ಎ.3: ಇರಾಕ್‌ನ ಮೊಸುಲ್‌ನಲ್ಲಿ ಹತ್ಯೆಗೀಡಾದ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಂದು ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮೃತರ ಮೃತದೇಹಗಳನ್ನು ಸ್ವದೇಶಕ್ಕೆ ತರಲು ವಿದೇಶಿ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ರವಿವಾರದಂದು ಇರಾಕ್‌ಗೆ ತೆರಳಿದ್ದರು.

ಸೋಮವಾರದಂದು 38 ಮೃತದೇಹಗಳನ್ನು ಹೊತ್ತ ವಿಶೇಷ ವಿಮಾನವು ಅಮೃತಸರದಲ್ಲಿ ಬಂದಿಳಿದಿತ್ತು. 2014 ಜೂನ್‌ನಲ್ಲಿ ಐಸಿಸ್ ಉಗ್ರರು ಇರಾಕ್‌ನ ಮೊಸುಲ್‌ನಿಂದ ಭಾರತದ 40 ಮಂದಿಯನ್ನು ಅಪಹರಣ ಮಾಡಿದ್ದರು. ಈ ಪೈಕಿ ಹರ್ಜಿತ್ ಮಸಿಹ್ ಎಂಬಾತ ತಾನು ಬಾಂಗ್ಲಾದೇಶದ ಪ್ರಜೆ ಎಂದು ಸುಳ್ಳು ಹೇಳಿ ಉಗ್ರರ ಕೈಯಿಂದ ತಪ್ಪಿಸಿಕೊಂಡಿದ್ದ. ಉಳಿದ 39 ಮಂದಿಯನ್ನು ಬದೂಶ್‌ಗೆ ಕೊಂಡೊಯ್ದು ಅಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಸಂಸತ್‌ಗೆ ತಿಳಿಸಿದ್ದರು. ಹತ್ಯೆಗೀಡಾದ 39 ಜನರ ಪೈಕಿ 38 ಮಂದಿಯ ಡಿಎನ್‌ಎ ಪರೀಕ್ಷೆಯಲ್ಲಿ ಶೇ. 95 ಹೋಲಿಕೆಯಾಗಿದ್ದರೆ ಒಬ್ಬರ ಡಿಎನ್‌ಎ ಮಾತ್ರ ಶೇ. 70 ಹೋಲಿಕೆಯಾಗಿರುವುದರಿಂದ ಆ ಮೃತದೇಹವನ್ನು ವಾಪಸ್ ತರಲು ಸಾಧ್ಯವಾಗಿಲ್ಲ ಎಂದು ವಿ.ಕೆ ಸಿಂಗ್ ತಿಳಿಸಿದ್ದಾರೆ.

ಮೃತ 39 ಜನರ ಪೈಕಿ 27 ಮಂದಿ ಪಂಜಾಬ್‌ನವರಾಗಿದ್ದರೆ, ನಾಲ್ಕು ಮಂದಿ ಹಿಮಾಚಲ ಪ್ರದೇಶ, ಇಬ್ಬರು ಪಶ್ಚಿಮ ಬಂಗಾಳ ಮತ್ತು ಆರು ಮಂದಿ ಬಿಹಾರ ಮೂಲದವರಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News