ಸಿದ್ದರಾಮಯ್ಯ ದುರಹಂಕಾರಕ್ಕೆ ಕಾಂಗ್ರೆಸ್ 25 ಸ್ಥಾನಕ್ಕೆ ಕುಸಿದರೂ ಅಚ್ಚರಿಯಿಲ್ಲ: ಹೆಚ್.ಡಿ. ಕುಮಾರಸ್ವಾಮಿ

Update: 2018-04-03 11:22 GMT

ಹಾಸನ,ಎ.03: ಕಾಂಗ್ರೆಸ್-ಬಿಜೆಪಿಯ ಚಾಣಕ್ಯ ತಂತ್ರ ಈ ಬಾರಿ ರಾಜ್ಯದಲ್ಲಿ ನಡೆಯುವುದಿಲ್ಲ. ಹಾಗೆಯೇ ಅತಂತ್ರ ಸರಕಾರ ಕೂಡ ಬರುವುದಿಲ್ಲ. ಜೊತೆಗೆ ಸಿದ್ದರಾಮಯ್ಯ ದುರಂಕಾರದಿಂದಾಗಿ ಕಾಂಗ್ರೆಸ್ ಪಕ್ಷ 25 ಸ್ಥಾನಕ್ಕೆ ಇಳಿದರೂ ಅಚ್ಚರಿಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ನಗರದ ಖಾಸಗಿ ಹೊಟೇಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪದೇ ಪದೇ ಜೆಡಿಎಸ್‍ಗೆ 25 ಸ್ಥಾನ ಮಾತ್ರ ಬರುವುದೆಂದು ಹೇಳಿಕೆ ಕೊಡುವುದರ ಮೂಲಕ ಜನತೆಯನ್ನು ಡೈವರ್ಟ್ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಅಂತಹ ಆಸೆ ಏನಾದರೂ ಇಟ್ಟುಕೊಂಡಿದ್ದರೆ ಅವರು ಮತ್ತೊಂದು ಜನ್ಮ ಎತ್ತಿ ಬಂದರೂ ಅದು ಸಾಧ್ಯವಾಗುವುಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಜಡಿಎಸ್‍ನ್ನು ಕೆಣಕಿದಂತೆ ನಮಗೆ ಲಾಭವಾಗಲಿದೆ. ಮೇ.18 ರಂದು ನನ್ನ ತಂದೆ ದೇವೇಗೌಡರ ಹುಟ್ಟುಹಬ್ಬ ಇದ್ದು, ಆ ವೇಳೆಗೆ ಜನರ ಸಂಪೂರ್ಣ ಬೆಂಬಲದೊಂದಿಗೆ ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಸರಕಾರ ಬರುವ ವಿಶ್ವಾಸ ವ್ಯಕ್ತಪಡಿಸಿದ ಅವರು, ನಿನ್ನೆ ನಡೆದ ಜೆಡಿಎಸ್ ಸಮಾವೇಶದಲ್ಲಿ ನನ್ನ ಭಾವನೆಯನ್ನು ಜನರ ಮುಂದೆ ಇಟ್ಟಿದ್ದೇನೆಯೇ ಹೊರತು, ಖಂಡಿತಾ ಉದ್ಧಟತನದ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು. ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಅವರು ಹೇಗೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಚಾಮುಂಡೇಶ್ವರಿಯಲ್ಲಿ ಅವರ ಗೆಲುವು ಅಷ್ಟು ಸುಲಭವಲ್ಲ. ರಾಮನಗರದಲ್ಲಿ ನಾನು ಅರ್ಜಿ ಹಾಕಿ ಬರುವೆ ಅಷ್ಟೆ. ಜನರೇ ನನ್ನನ್ನು ಗೆಲ್ಲಿಸುತ್ತಾರೆ ಎಂದು ಹೇಳುವ ಮೂಲಕ ಹೇಳಿದರು. 

ನನ್ನ ನಿರ್ಧಾರದಿಂದ ಪೆಟ್ಟು ತಿಂದಿದ್ದೇನೆ. ಆದರೆ ತಾಂತ್ರಿಕವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದೇನೆ. ಸಿದ್ದರಾಮಯ್ಯ ಅವರು ದುರಹಂಕಾರದಿಂದ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂದು ದೂರಿದ್ದಾರೆ. ಆದರೆ ಈಗ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಮಾಡುತ್ತಿರುವುದೇನು. ವರುಣಾ ಕ್ಷೇತ್ರಕ್ಕೆ ಇಬ್ಬರು ಪುತ್ರರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಚಾಮುಂಡೇಶ್ವರಿಯಲ್ಲಿ ಬಿಜೆಪಿ ಜೆಡಿಎಸ್ ಒಂದಾದರೂ ನನ್ನ ಸೋಲಿಸಲು ಆಗಲ್ಲ ಎಂದು ಸಿಎಂ ಹೇಳಿದ್ದಾರೆ. ಅವರೇನು ಜ್ಯೋತಿಷ್ಯ ಕಲಿಯುತ್ತಿದ್ದಾರಾ? ಮತದಾರರು ಅವರ ಜೇಬಿನಲ್ಲಿಲ್ಲ, ಮುಂದೆ ಯಾರು ಗೆಲ್ಲಬೇಕು ಎಂಬುದನ್ನು ಜನ ತೀರ್ಮಾನ ಮಾಡಲಿದ್ದಾರೆ. ಝಮೀರ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವರೊಬ್ಬ ರಾಜಕೀಯ ವಿದೂಷಕ ಎಂದು ಟೀಕೆ ಮಾಡಿದರು. ಕಾಂಗ್ರೆಸ್ ಸರಕಾರದಲ್ಲಿ ರೈತರ ಬೆಳೆ ನಷ್ಟಕ್ಕೆ ಯಾವ ರೀತಿಯೂ ಸ್ಪಂದಿಸಲಿಲ್ಲ. ಎರಡು ದಿನಕ್ಕೆ 5 ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಂದಿದ್ದಾರೆ. ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿ ಅಲ್ಲಿಯೂ ಕೂಡ ಟೋಪಿ ಹಾಕಿದ್ದಾರೆ ಎಂದು ಕಿಡಿಕಾರಿದರು. 

ನಾವು ರಾಜ್ಯದ ಎಲ್ಲಿ ಪ್ರವಾಸ ಮಾಡಿದರೂ ಜನರು ಹೇಳುವಂತೆ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡುವ ಧ್ವನಿ ಕೇಳಿ ಬಂದಿದೆ. ಕಾಂಗ್ರೆಸ್ ಆಡಳಿತ ಜನರ ಕಷ್ಟಗಳಿಗೆ ಸ್ಪಂದಿಸದೆ ಜಾಹಿರಾತು ಮೂಲಕ ಹೇಳಿಕೆ ಕೊಟ್ಟು ಜನರಿಗೆ ಮೋಸ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಸರಕಾರ ಆಡಚಣೆ ಮಾಡಿದೆ. ರಾಜಕೀಯವಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕೇಸು ಹಾಕುವುದು, ಜೊತೆಗೆ ಕಾಂಗ್ರೆಸ್‍ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಫಲಾನುಭವಿಗಳಿಗೆ ಯಾವುದೇ ಸೌಲಭ್ಯವನ್ನು ನೀಡಲಿಲ್ಲ ಎಂದು ಆರೋಪಿಸಿದರು.

ಪಕ್ಷದ ಉಳಿವು, ಕಾರ್ಯಕರ್ತರ ಭಾವನೆಯಿಂದ ಚನ್ನಪಟ್ಟಣದಿಂದ ನಾನೇ ಅಭ್ಯರ್ಥಿಯಾಗುವ ಅನಿವಾರ್ಯತೆ ಇದೆ. ಆ ದೃಷ್ಟಿಯಿಂದ ಇಂದು ನನ್ನ ನಿರ್ಧಾರ ಪ್ರಕಟ ಮಾಡುವೆ ಎಂದು ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ನಿಲ್ಲುವುದು ಇಬ್ಬರು ಮಾತ್ರ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗುರಿ 113 ಸ್ಥಾನಗಳಲ್ಲಿ ಗೆಲ್ಲುವುದು. ರೈತರ ಪೂರ್ಣ ಸಾಲಮನ್ನಾ ಮಾಡಿ ಮುಂದಿನ ರೈತ ಬದುಕಿಗೆ ಹೊಸ ಕೃಷಿ ನೀತಿ ಕೂಡ ನನ್ನ ಕಾರ್ಯಕ್ರಮದಲ್ಲಿ ಇದೆ. ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನವನ್ನು ಗೆದ್ದು ತಂದೆಗೆ ತಂದು ಕೊಡಲಾಗುವುದು ಎಂದರು. 

ನಟ ಸುದೀಪ್ ನಡುವೆ ಆತ್ಮೀಯ ಸಂಬಂಧವಿದೆ. ಅವರು ತಮ್ಮ ಹುಟ್ಟುಹಬ್ಬಕ್ಕೆ ಕರೆದಿದ್ದರು. ಇದು ಇಂದು ಸೌಹಾರ್ದ ಭೇಟಿಯಾಗಿತ್ತು. ಈ ವೇಳೆ ರಾಜಕೀಯ ಬೆಳವಣಿಗೆ ಚರ್ಚೆ ಮಾಡಿದ್ದೇವೆ. ಅವರ ಮೇಲೆ ನಾನು ಯಾವುದೇ ಒತ್ತಡ ಹಾಕುವುದಿಲ್ಲ. ಕರ್ನಾಟಕದಲ್ಲಿ ರಾಜಕೀಯ ಸರಿಪಡಿಸಲು ಒಳ್ಳೆಯ ಸರಕಾರ ಬೇಕು. ಅದಕ್ಕಾಗಿ ಉತ್ತಮ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿದ್ದೇನೆ. ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನ ಮಾಡಿದ್ದೇನೆ ಎಂದ ಅವರು , ಸುದೀಪ್ ಸೂಕ್ತ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ. ಆದರೆ ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದರು. ಇನ್ನು ಅಂಬರೀಶ್‍ಗೆ ಬಿ.ಫಾರಂ ಕೊಟ್ಟು ವಾಪಸ್ ಪಡೆದರು. ಸಿನಿಮಾ ರಂಗದಲ್ಲಿ ಇದ್ದವರು ರಾಜಕೀಯಕ್ಕೆ ಅದರಿಂದ ಬಂದಾಗ ಹೊರ ಬರಬೇಕು ಎಂದು ದೇವೇಗೌಡರು ಸಲಹೆ ನೀಡಿದ್ದರು ಎಂದರು. 

ಇನ್ನೊಂದು ವಾರದಲ್ಲಿ ಜೆಡಿಎಸ್ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಇನ್ನೂ ಎರಡು ವಾರಗಳ ಕಾಲ ಎಲ್ಲಾ ಪಕ್ಷಗಳಲ್ಲೂ ಪಕ್ಷಾಂತರ ಪರ್ವ ನಡೆಯುತ್ತದೆ ಎಂದರು. ನಿನ್ನೆ ನಡೆದ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಮಳೆಯ ಅಡ್ಡಿಯಿಂದ ಸ್ವಲ್ಪ ತೊಂದರೆ ಆಗಿದೆ. ಮನೆ ಮಗ ಜಿಲ್ಲೆಗೆ ಬರುತ್ತಿದ್ದಾನೆ ಎಂದು ಮಹಿಳೆಯರಲ್ಲಿ ಕೇಳಿ ಬಂದಿತು. ಮಳೆಯಲ್ಲಿಯೇ ನೆನೆದು ನನಗೆ ತೋರಿಸಿದ ಅಭಿಮಾನ ಕಂಡಿದ್ದೇನೆ. ಜಿಲ್ಲಾ ಕ್ರೀಡಾಂಗಣ ಪೂರ್ಣವಾಗಿ ತುಂಬಿತ್ತು. ಯಾವ ಪಕ್ಷದ ಕಾರ್ಯಕ್ರಮ ಇದ್ದರೂ ಇಂತಹ ಆಸಕ್ತಿ ತೋರಿಸದೆ ಖಾಲಿ ಮಾಡುತ್ತಿದ್ದರು. ಜಿಲ್ಲೆಯ ಜನರು ನನಗೆ ತೋರಿಸಿದ ಅಭಿಮಾನ ಕೊನೆ ಉಸಿರು ಇರುವವರೆಗೂ ಮರೆಯದ ಘಟನೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಜನತೆ ಅಭಿಮಾನ ತೋರಿಸಿರುವುದಾಗಿ ಹರ್ಷ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಹೆಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News