ಯೂಟ್ಯೂಬ್ ಕಚೇರಿಯಲ್ಲಿ ಶೂಟೌಟ್!

Update: 2018-04-04 04:36 GMT

ಸ್ಯಾನ್‌ಫ್ರಾನ್ಸಿಸ್ಕೊ, ಎ.4: ಕ್ಯಾಲಿಫೋರ್ನಿಯಾದಲ್ಲಿರುವ ಯೂಟ್ಯೂಬ್ ಕಚೇರಿಯಲ್ಲಿ ಮಂಗಳವಾರ ನಡೆದ ಶೂಟೌಟ್ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಘಟನೆಯಿಂದ ಇಡೀ ಕಚೇರಿ ಅಲ್ಲೋಲ-ಕಲ್ಲೋಲವಾಗಿದ್ದು, ಶಂಕಿತ ಮಹಿಳೆಯೊಬ್ಬಳು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗೂಗಲ್ ಮಾಲಕತ್ವದ ವೀಡಿಯೊ ಶೇರಿಂಗ್ ಸೇವಾ ಕಚೇರಿಯಲ್ಲಿ ನಡೆದ ಘಟನೆಯಿಂದ ಇಡೀ ಸ್ಯಾನ್ ಬ್ರೂನೊ ನಗರದಲ್ಲಿ ಭೀತಿ ಆವರಿಸಿದೆ.

"ಕಚೇರಿಯೊಳಗೆ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸ್ವತಃ ಗಾಯ ಮಾಡಿಕೊಂಡು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಹುಶಃ ಈಕೆಯೇ ಶೂಟರ್ ಆಗಿರಬೇಕು" ಎಂದು ಸ್ಯಾನ್ ಬ್ರೋನೊ ಪೊಲೀಸ್ ಮುಖ್ಯಸ್ಥ ಎಡ್ ಬರ್ಬೆರಿನಿ ಹೇಳಿದ್ದಾರೆ.

ಘಟನೆಯಲ್ಲಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಆದರೆ ಇದರಲ್ಲಿ ಶೂಟರ್ ಕೂಡಾ ಸೇರಿದ್ದಾರೆಯೇ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಅಮೆರಿಕದಲ್ಲಿ ಮಹಿಳೆಯರು ಗುಂಡು ಹಾರಿಸುವ ಘಟನೆ ತೀರಾ ಅಪರೂಪವಾಗಿದ್ದು, ಬಹುತೇಕ ಗುಂಡಿನ ದಾಳಿಗಳನ್ನು ಪುರುಷರೇ ಎಸಗುತ್ತಿದ್ದಾರೆ.

ಕಳೆದ 13 ವರ್ಷಗಳಲ್ಲಿ ಅಮೆರಿಕದಲ್ಲಿ 160 ಗುಂಡಿನ ದಾಳಿಗಳು ನಡೆದಿದ್ದು, ಈ ಪೈಕಿ ಆರು ಪ್ರಕರಣಗಳಲ್ಲಿ ಮಾತ್ರ ಮಹಿಳೆಯರು ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News