ತುಮಕೂರು: ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ

Update: 2018-04-04 16:30 GMT

ತುಮಕೂರು,ಏ.04: ಕೊನೆಯ ಹಂತದ ಬೆಂಗಳೂರು ವಿಭಾಗದ ಜನಾಶೀರ್ವಾದ ಯಾತ್ರೆಗೆ ತುಮಕೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಸಿದ್ದಗಂಗಾ ಮಠಕ್ಕೆ ಆಗಮಿಸಿ ಡಾ.ಶ್ರೀಶಿವಕುಮಾರಸ್ವಾಮೀಜಿ ಯವರಿಗೆ 111 ನೇ ಜನ್ಮದಿನೋತ್ಸವಕ್ಕೆ ಶುಭಕೋರಿ, ಗುರುವಂದನೆ ಸಲ್ಲಿಸಿ, ಆಶೀರ್ವಾದ ಪಡೆದರು.

ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ ರಾಹುಲ್ ಗಾಂಧಿ, ರಾಜ್ಯ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಕೇಂದ್ರದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಟಿ.ಬಿ.ಜಯಚಂದ್ರ, ಡಿ.ಕೆ.ಶಿವಕುಮಾರ್, ಶಾಸಕರಾದ ಕೆ.ಎನ್.ರಾಜಣ್ಣ, ಡಾ.ರಫೀಕ್ ಅಹಮದ್ ಅವರೊಂದಿಗೆ ಶತಾಯುಷಿ ಡಾ.ಶ್ರೀಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಶ್ರೀಗಳೊಂದಿಗೆ ಚರ್ಚೆ ನಡೆಸಿದರು.

ಮಠದಿಂದ ತೆರೆದ ವಾಹನದಲ್ಲಿ ಕ್ಯಾತ್ಸಂದ್ರ ಸರ್ಕಲ್‍ಗೆ ಆಗಮಿಸಿದ ರಾಹುಲ್‍ಗಾಂಧಿ, ತಮ್ಮ ಅಜ್ಜಿ ಶ್ರೀಮತಿ ಇಂದಿರಾಗಾಂಧಿ ಅವರು ಭಾಷಣ ಮಾಡಿದ್ದ ಹೈಸ್ಕೂಲ್ ಮೈದಾನದ ಪಕ್ಕದಲ್ಲಿಯೇ ವಾಹನದಲ್ಲಿ ನಿಂತು ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಆಕಾಂಕ್ಷಿ ಆರ್.ರಾಜೇಂದ್ರ ಶ್ರೀಮತಿ ಇಂದಿರಾಗಾಂಧಿ ಅವರು ಭಾಷಣ ಮಾಡಿದ ಛಾಯಾಚಿತ್ರವನ್ನು ನೆನಪಿನ ಕಾಣಿಕೆಯಾಗಿ ರಾಹುಲ್‍ಗಾಂಧಿ ಅವರಿಗೆ ನೀಡಿ, ಅಭಿನಂದಿಸಿದರು.

ಕ್ಯಾತ್ಸಂದ್ರದಿಂದ ಬಿ.ಹೆಚ್.ರಸ್ತೆಯ ಮೂಲಕ ಜಿಲ್ಲಾ ಕಾಂಗ್ರೆಸ್ ಕಚೇರಿ ಇರುವ ಭದ್ರಮ್ಮ ವೃತ್ತಕ್ಕೆ ಆಗಮಿಸಿದ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರೊಂದಿಗೆ ರೋಡ್ ಶೋ ನಡೆಸಿದರು. ಸಂಜೆ 5 ಗಂಟೆಗೆ ಟೌನ್‍ಹಾಲ್ ವೃತ್ತಕ್ಕೆ ಆಗಮಿಸಿದ ರಾಹುಲ್ 10 ನಿಮಿಷಕ್ಕು ಹೆಚ್ಚು ಕಾಲ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ವಾಗ್ಧಾಳಿ ನಡೆಸಿದರು.

ಕಳೆದ ನಾಲ್ಕು ವರ್ಷಗಳ ಹಿಂದೆ ನಾನು ಈ ದೇಶದ ದೊಡ್ಡ ಚೌಕಿದಾರ(ಕಾವಲುಗಾರ) ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರಮೋದಿ, ದೇಶದ ವಿವಿಧ ಬ್ಯಾಂಕುಗಳ ಹಣ ಲಪಟಾಯಿಸಿ ಒಬ್ಬೊಬ್ಬರಾಗಿ ಊರು ಬಿಡುತ್ತಿದ್ದರೂ ಅವರನ್ನು ಹಿಡಿಯುವ ಗೋಜಿಗೆ ಹೋಗುತ್ತಿಲ್ಲ. ಬದಲಾಗಿ, ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳ ಮಕ್ಕಳ ಮೂಲಕ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿ, ಅವರ ಪರವಾಗಿ ಪರೋಕ್ಷವಾಗಿ ನಿಂತಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿಗೂ ಹೆಚ್ಚು ಹಣ ಮೋಸ ಮಾಡಿದ ನೀರವ್ ಮೋದಿಯ ಪರ ಕೇಂದ್ರದ ಹಣಕಾಸು ಸಚಿವ ಅರುಣ್‍ ಜೇಟ್ಲಿ ಅವರ ಮಗಳು ವಾದಿಸುತ್ತಿದ್ದಾರೆ. ಐಪಿಎಲ್ ಹಗರಣದ ಆರೋಪಿ ಲಲಿತ ಮೋದಿ ಪರ ರಾಜ್ಯಸ್ಥಾನ ಸಿ.ಎಂ ಕುಟುಂಬ ನಿಂತಿದೆ. ಈ ಉದಾಹರಣೆಗಳೇ ದೇಶದ ಪ್ರಧಾನ ಸೇವಕರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಎತ್ತಿತೋರಿಸುತ್ತವೆ ಎಂದು ರಾಹುಲ್‍ಗಾಂಧಿ ಹೇಳಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಬಿದಾಯಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತಿತರರ ಯೋಜನೆಗಳ ಮೂಲಕ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ವರ್ಗದ ಬಡವರಿಗೆ ಅನುಕೂಲ ಮಾಡಿಕೊಟ್ಟಿದೆ. ಇಂತಹ ಜನಪರ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದರೆ ಮತ್ತಷ್ಟು ಸವಲತ್ತುಗಳು ರಾಜ್ಯದ ಜನರಿಗೆ ದೊರೆಯಲಿದೆ. ಇದನ್ನು ಮತದಾರರು ಅರ್ಥಮಾಡಿಕೊಂಡು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ನಂತರ ಟೌನ್‍ಹಾಲ್ ವೃತ್ತದಿಂದ ಕುಣಿಗಲ್ ರಸ್ತೆಯ ಮೂಲಕ ತೆರಳಿದ ರಾಹುಲ್‍ಗಾಂಧಿ, ಗೂಳೂರು, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ನಾಗವಲ್ಲಿ, ಹೆಬ್ಬೂರುಗಳಲ್ಲಿ ಕೆಲ ಕಾಲ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಸಾರ್ವಜನಿಕರಿಗೆ ತಪ್ಪದ ಕಿರಿಕಿರಿ: ಬುಧವಾರ ಮಧ್ಯಾಹ್ನ 2:30ಕ್ಕೆ ಸಿದ್ದಗಂಗಾ ಮಠಕ್ಕೆ ರಾಹುಲ್‍ಗಾಂಧಿ ಆಗಮಿಸುವ ಹಿನ್ನಲೆಯಲ್ಲಿ ಕೆ.ಲಕ್ಕಪ್ಪ ಸರ್ಕಲ್‍ನಿಂದ ಕ್ಯಾತ್ಸಂದ್ರದವರೆಗೆ ಪೊಲೀಸರು ರಸ್ತೆ ಬಂದ್ ಮಾಡಿ ಝೀರೋ ಟ್ರಾಫೀಕ್ ಮಾಡಿದ್ದ ಕಾರಣ ಬಿ.ಹೆಚ್ ರಸ್ತೆ ಮೂಲಕ ಬಡಾವಣೆಗಳಿಗೆ ತೆರಳಲು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲಿ ಮಠದಲ್ಲಿ ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರು, ಊಟಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ನಗರದ ಟೌನ್‍ಹಾಲ್ ಮೂಲಕ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ತೆರಳುತ್ತಿದ್ದ ಜನರನ್ನು ಪೊಲೀಸರು ಮಧ್ಯಾಹ್ನ 2 ಗಂಟೆಯಿಂದಲೇ ನಿರ್ಭಂದಿಸಿದ್ದ ಕಾರಣ ಸಂಜೆ ಐದು ಗಂಟೆಯವರೆಗೆ ಜನರು ಪರದಾಡಿದರು. 

ನಗರದ ಶ್ರೀ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಡಾ ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೇ ಹುಟ್ಟುಹಬ್ಬದ ಅಂಗವಾಗಿ 100 ಕೆಂಪುಗುಲಾಬಿ ಹಾಗೂ 11 ಬಿಳಿ ಗುಲಾಬಿ ಇರುವ ಒಟ್ಟು 111 ಗುಲಾಬಿಯುಳ್ಳ ಬೊಕ್ಕೆಯನ್ನು ನೀಡಿ ಅಭಿನಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News