ದೇಶದ ಸೌಹಾರ್ದತೆಗೆ ಗಂಡಾಂತರ ಎದುರಾಗಿದೆ: ಯೋಗೇಂದ್ರ ಯಾದವ್

Update: 2018-04-04 17:57 GMT

ಮಂಡ್ಯ, ಎ.4: ರಾಜಕೀಯ ಪಕ್ಷಗಳು ಕೃಷಿಕರು, ದುರ್ಬಲರು, ದುಡಿಯುವ ವರ್ಗವನ್ನು ವಂಚಿಸುತ್ತಿವೆ. ದೇಶದ ಸೌಹಾರ್ದತೆ, ವಿವಿಧತೆ, ಅಭಿವೃದ್ಧಿಗೆ ಗಂಡಾಂತರ ಎದುರಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷ ಯೋಗೇಂದ್ರ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ರಾಜಕಾರಣದಲ್ಲಿ ಒಂದು ನಿರ್ದಿಷ್ಟ ಗುರಿ, ಯೋಜನೆ ಇಲ್ಲದಾಗಿದೆ. ರಾಜಕೀಯ ಪಕ್ಷಗಳಲ್ಲಿ ಹಣಬಲ, ತೋಳ್ಬಲ, ಜಾತಿಬಲ ಮೇಳೈಸಿದೆ ಎಂದು ಆರೋಪಿಸಿದರು.

ಹಾಲಿ ಇರುವ ರಾಜಕೀಯ ಪಕ್ಷಗಳ ಸಿದ್ಧ ಮಾದರಿ ರಾಜಕೀಯಕ್ಕೆ ಪರ್ಯಾಯವಾಗಿ ಸ್ವರಾಜ್ ಇಂಡಿಯಾ ಪಕ್ಷ ಜನ್ಮ ತಳೆದಿದೆ. ಸ್ವರಾಜ್ ಇಂಡಿಯಾ ಪಕ್ಷಕ್ಕೆ ರೈತ ಚಳವಳಿ, ದಲಿತ ಚಳವಳಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಳು ಬುನಾದಿಯಾಗಿವೆ ಎಂದು ಅವರು ಹೇಳಿದರು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವವರ ಹಾಗೂ ಭ್ರಷ್ಟಾಚಾರ, ಮಾನವೀಯತೆ ಕಳೆದುಕೊಳ್ಳುತ್ತಿರುವ ನಾಯಕರು ಮತ್ತು ನೈತಿಕತೆ ಇಲ್ಲದ ಸರಕಾರಗಳ ವಿರುದ್ಧ ತಮ್ಮ ಪಕ್ಷ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು.

ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದೊಡ್ಡ ದುರಂತ. ಸರಕಾರಗಳ ನಿರ್ಲಕ್ಷ್ಯ, ಪ್ರಕೃತಿ ವಿಕೋಪ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು ರೈತರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಆರು ಕ್ಷೇತ್ರಗಳಲ್ಲಿ ಸ್ಪರ್ಧೆ:
ಮಂಡ್ಯ ಜಿಲ್ಲೆಯ ಮೇಲುಕೋಟೆ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಸ್ವರಾಜ್ ಇಂಡಿಯಾ ಸ್ಪರ್ಧೆ ಮಾಡಲಿದೆ ಎಂದು ಹೇಳಿದರು.

ಮೇಲುಕೋಟೆಯಿಂದ ದರ್ಶನ್ ಪುಟ್ಟಣ್ಣಯ್ಯ, ಮದ್ದೂರು ಕ್ಷೇತ್ರದಿಂದ ಎಸ್.ಎಚ್.ಲಿಂಗೇಗೌಡ, ಯಾದಗಿರಿಯಿಂದ ವೈಜನಾಥಪಾಟೀಲ್, ಮಹದೇವಪುರ(ಬೆಂಗಳೂರು ನಗರ)ದಿಂದ ರಮೇಶ್‍ಚಂದ್ರ, ಚಳ್ಳಕೆರೆಯಿಂದ ಕೆ.ಪಿ.ಭೂತಯ್ಯ ಹನೂರು ಕ್ಷೇತ್ರದಿಂದ ಶೈಲೇಂದ್ರ ಅವರು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಸ್ವರಾಜ್ ಇಂಡಿಯಾ ಹಾಗೂ ರೈತಸಂಘದ ಮುಖಂಡರಾದ ಚಾಮರಸಮಾಲಿ ಪಾಟೀಲ, ಬಡಗಲಪುರ ನಾಗೇಂದ್ರ, ದರ್ಶನ್ ಪುಟ್ಟಣ್ಣಯ್ಯ, ಅಮ್ಜದ್‍ಪಾಷಾ, ಎಸ್.ಎಚ್.ಲಿಂಗೇಗೌಡ ಹಾಗೂ ಶಂಭೂನಹಳ್ಳಿ ಸುರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News