ಎ.12 ರಂದು ಕರ್ನಾಟಕ ಬಂದ್

Update: 2018-04-05 13:06 GMT

ಬೆಂಗಳೂರು, ಎ.5: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ಆಗ್ರಹಿಸಿ ಹಾಗೂ ತಮಿಳುನಾಡು ಬಂದ್‌ಗೆ ಕರೆ ನೀಡಿರುವುದನ್ನು ಖಂಡಿಸಿ ಎ.12 ರಂದು ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ಮುಂದಾಗಿವೆ.

ತಮಿಳುನಾಡು ಬಂದ್ ಮಾಡುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಳಿಯ ಹೊಸೂರು ರಸ್ತೆಯ ಅತ್ತಿಬೆಲೆ ಸಮೀಪದ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಕೇಂದ್ರ ಸರಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಲು ಮುಂದಾಗಬಾರದು ಎಂದು ಆಗ್ರಹಿಸಿದರು.

ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಸ್ವಲ್ಪ ಮಟ್ಟಿಗೆ ನ್ಯಾಯ ದೊರಕಿದೆ. ಆದರೆ, ಈಗ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿದರೆ ನಮ್ಮ ಎಲ್ಲ ಅಣೆಕಟ್ಟುಗಳ ಉಸ್ತುವಾರಿ ಕೇಂದ್ರದ ಪಾಲಾಗುತ್ತದೆ ಎಂದ ಅವರು, ಕೇಂದ್ರ ಸರಕಾರ ಮಂಡಳಿ ರಚನೆ ಮಾಡಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಮಿಳುನಾಡು ಸರಕಾರ ರಾಜಕೀಯ ಹೋರಾಟ ಮಾಡುತ್ತಿದೆ. ಸುಪ್ರೀಂಕೋರ್ಟ್‌ನ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಈ ಹಿಂದೆ ನ್ಯಾಯಾಲಯದ ತೀರ್ಪನ್ನು ಗೌರವಿಸಿ ತಮಿಳುನಾಡಿಗೆ ನೀರನ್ನು ಹರಿಸಲಾಗಿದೆ. ಆದರೆ, ಈಗ ಯಾಕೆ ನಮ್ಮ ಪರವಾದ ತೀರ್ಪನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್, ನಟರಾದ ಕಮಲ ಹಾಸನ್, ರಜನಿಕಾಂತ್ ಕಾವೇರಿ ವಿಷಯದಲ್ಲಿ ಈವರೆಗೆ ದನಿ ಎತ್ತಿರಲಿಲ್ಲ. ಈಗ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಕಾವೇರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದು ಹಾಸ್ಯಾಸ್ಪದವಾಗಿದೆ. ಕಾವೇರಿಯಿಂದ ಅವರಿಗೆ ಯಾವುದೇ ಅನ್ಯಾಯವಾಗಿಲ್ಲ. ನಮಗೆ ನಿರಂತರ ಅನ್ಯಾಯವಾಗಿದೆ. ಕೇಂದ್ರ ಹಾಗೂ ನ್ಯಾಯಾಲಯವು ರಾಜ್ಯಕ್ಕೆ ಇನ್ನೂ ಹೆಚ್ಚಿನ ನ್ಯಾಯ ಒದಗಿಸಬೇಕೆಂದು ವಾಟಾಳ್ ನಾಗರಾಜ್ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಕೆ.ಆರ್.ಕುಮಾರ್, ಕರವೇ ಅಧ್ಯಕ್ಷ ಶಿವರಾಮೇಗೌಡ, ಪ್ರವೀಣ್ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಮಂಜುನಾಥ್ ದೇವು, ಎಚ್.ಪಿ.ಗಿರೀಶ್‌ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News