ಚಾಮರಾಜಪೇಟೆ: ಅಭ್ಯರ್ಥಿಯಾಗಿ ಅಲ್ತಾಫ್‌ಖಾನ್ ಆಯ್ಕೆ ಬೆನ್ನಲ್ಲೆ ಜೆಡಿಎಸ್‌ನಲ್ಲಿ ಬಂಡಾಯದ ಧ್ವನಿ

Update: 2018-04-05 14:57 GMT

ಬೆಂಗಳೂರು, ಎ.5: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲದ ಕಣವಾಗಿರುವ ಕ್ಷೇತ್ರಗಳ ಪೈಕಿ ಒಂದಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಲ್ಲಿ ಬಂಡಾಯದ ಧ್ವನಿ ಮೊಳಗಿದೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜೆಡಿಎಸ್ ಶಾಸಕ ಝಮೀರ್‌ಅಹ್ಮದ್‌ಖಾನ್, ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೆ, ಕಾಂಗ್ರೆಸ್ ಪಕ್ಷದ ಸ್ಥಳೀಯ ಪ್ರಭಾವಿ ಮುಖಂಡ ಅಲ್ತಾಫ್‌ಖಾನ್ ಜೆಡಿಎಸ್ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ.

ಅಲ್ಲದೆ, ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಲ್ತಾಫ್‌ಖಾನ್ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಘೋಷಿಸಿರುವುದು, ಕ್ಷೇತ್ರದ ಪಾದರಾಯನಪುರ ವಾರ್ಡ್‌ನ ಜೆಡಿಎಸ್ ಪಾಲಿಕೆ ಸದಸ್ಯ ಇಮ್ರಾನ್ ಪಾಷರನ್ನು ಕೆರಳಿಸಿದೆ.

ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಅಲ್ತಾಫ್‌ಖಾನ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಸರಿಯಲ್ಲ. ನಮ್ಮ ವೈರಿ ಅಲ್ತಾಫ್ ಪರವಾಗಿ ಯಾವುದೇ ಕಾರಣಕ್ಕೂ ಪ್ರಚಾರ ಮಾಡುವುದಿಲ್ಲ ಎಂದು ಇಮ್ರಾನ್ ಪಾಷ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ನಾನು ಸಿದ್ಧನಿದ್ದೇನೆ. ಅಲ್ತಾಫ್‌ಖಾನ್ ಜೆಡಿಎಸ್ ಅಭ್ಯರ್ಥಿಯಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಅಲ್ತಾಫ್ ಅವರ ಪತ್ನಿ ಸೀಮಾ ಕಾಂಗ್ರೆಸ್ ಪಕ್ಷದಿಂದ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ರಾಜೀನಾಮೆ ನೀಡಿ ತಮ್ಮ ಪತಿ ಜೊತೆ ಬರಲಿ ಎಂದು ಇಮ್ರಾನ್‌ಪಾಷ ಸವಾಲು ಹಾಕಿದ್ದಾರೆ ಎನ್ನಲಾಗಿದೆ.

ಚಾಮರಾಜಪೇಟೆಯಲ್ಲಿ ಅಲ್ತಾಫ್‌ಖಾನ್ ಹಾಗೂ ಇಮ್ರಾನ್ ಪಾಷ ಬದ್ಧ ವೈರಿಗಳಾಗಿದ್ದು, ಇಬ್ಬರ ನಡುವಿನ ದ್ವೇಷ ಹಲವಾರು ಸಂಘರ್ಷಗಳಿಗೂ ಕಾರಣವಾಗಿದೆ. ಝಮೀರ್‌ಅಹ್ಮದ್‌ಖಾನ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಇಮ್ರಾನ್ ಪಾಷರನ್ನು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ನೀಡುವ ಭರವಸೆಯೊಂದಿಗೆ ಕುಮಾರಸ್ವಾಮಿ ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News