ರಶ್ಯ ದಿಗ್ಬಂಧನದಿಂದ ಭಾರತ-ಅಮೆರಿಕ ರಕ್ಷಣಾ ಸಂಬಂಧದ ಮೇಲೆ ಪರಿಣಾಮ?: ಅಮೆರಿಕ ಕಳವಳ

Update: 2018-04-05 16:43 GMT

ವಾಶಿಂಗ್ಟನ್, ಎ. 5: ರಶ್ಯದ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನಗಳು, ಭಾರತ ಮತ್ತು ಅಮೆರಿಕಗಳ ನಡುವಿನ ರಕ್ಷಣಾ ಬಾಂಧವ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ‘ತೀವ್ರ ಕಳವಳ’ ಹೊಂದಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತವು ರಶ್ಯದಿಂದ ಅತ್ಯಾಧುನಿಕ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮುಂತಾದ ಉನ್ನತ ವೌಲ್ಯದ ರಕ್ಷಣಾ ಉಪಕರಣಗಳನ್ನು ಖರೀದಿಸಿದರೆ, ಅಮೆರಿಕದ ದಿಗ್ಬಂಧನ ಕಾನೂನಿನನ್ವಯ ಭಾರತವೂ ಅಮೆರಿಕದ ದಿಗ್ಬಂಧನಗಳನ್ನು ಎದುರಿಸಬಹುದಾಗಿದೆ.

ರಶ್ಯದ ರಕ್ಷಣೆ ಮತ್ತು ಗುಪ್ತಚರ ಕ್ಷೇತ್ರಗಳೊಂದಿಗೆ ಪ್ರಮುಖ ವ್ಯವಹಾರಗಳನ್ನು ಮಾಡಿಕೊಳ್ಳುವ ದೇಶಗಳ ಮೇಲೆ ಎರಡನೆ ಹಂತದ ದಿಗ್ಬಂಧನಗಳನ್ನು ವಿಧಿಸಲು ಅಮೆರಿಕದ ದಿಗ್ಬಂಧನ ಕಾನೂನಿನ 231ನೆ ಪರಿಚ್ಛೇದ ಅವಕಾಶ ಮಾಡಿಕೊಡುತ್ತದೆ.

 ‘‘ಈ ಬಗ್ಗೆ ಭಾರತ ವ್ಯಕ್ತಪಡಿಸಿರುವ ಕಳವಳವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಹಾಗೂ ನಾವು ಕೂಡ ಈ ಬಗ್ಗೆ ಕಳವಳ ಹೊಂದಿದ್ದೇವೆ. ಈ ದಿಗ್ಬಂಧನಗಳನ್ನು ರಶ್ಯದ ವಿರುದ್ಧ ತರಲಾಗಿದೆಯೇ ಹೊರತು, ಭಾರತದ ವಿರುದ್ಧವಲ್ಲ’’ ಎಂದು ದಕ್ಷಿಣ ಮತ್ತು ಆಗ್ನೇಯ ಏಶ್ಯಕ್ಕಾಗಿನ ಅಮೆರಿಕದ ಉಪ ಸಹಾಯಕ ರಕ್ಷಣಾ ಕಾರ್ಯದರ್ಶಿ ಜೋ ಫೆಲ್ಟರ್ ಹೇಳಿದ್ದಾರೆ.

ರಶ್ಯದ ಆಯುಧಕ್ಕಾಗಿ ಭಾರತ ಮಾತುಕತೆ

4.5 ಬಿಲಿಯ ಡಾಲರ್ (ಸುಮಾರು 29,238 ಕೋಟಿ ರೂಪಾಯಿ) ವೆಚ್ಚದಲ್ಲಿ 5 ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ರಶ್ಯದೊಂದಿಗೆ ಭಾರತ ನಡೆಸುತ್ತಿರುವ ಮಾತುಕತೆ ಈಗ ಅತ್ಯಂತ ಮುಂದುರಿದ ಹಂತದಲ್ಲಿದೆ.

ರಶ್ಯದಿಂದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸುವುದನ್ನು ದಿಗ್ಬಂಧನ ಹೇರಬಹುದಾದ ಚಟುವಟಿಕೆ ಎಂಬುದಾಗಿ ಪರಿಗಣಿಸಬಹುದಾಗಿದೆ ಎಂಬುದಾಗಿ ಕೆಲವು ಸಂಸದರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News