ಸಿ.ಟಿ ರವಿ 8 ಕೋಟಿ ರೂ. ಮನೆ ಕಟ್ಟಿಸಿರುವ ಬಗ್ಗೆ ಮುತಾಲಿಕ್ ದಾಖಲೆ ನೀಡಲಿ: ಸಿ.ಎಚ್.ಲೋಕೇಶ್

Update: 2018-04-05 17:27 GMT

ಚಿಕ್ಕಮಗಳೂರು, ಎ.5: ಜಿಲ್ಲೆಯ ಕಾಂಗ್ರೆಸ್ ಮುಖಂಡರು ಇದುವರೆಗೂ ಎಸಿ ಕೋಣೆಯಲ್ಲಿಯೇ ಕುಳಿತು ಪಕ್ಷದ ಸಂಘಟನೆ ಮಾಡುತ್ತಿದ್ದರು. ಸದ್ಯ ಚುನಾವಣೆ ಬಂದಿರುವುದರಿಂದ ದಿಢೀರನೆ ಮುಖಂಡರಿಗೆ ಜನರ ಸಮಸ್ಯೆಗಳ ಬಗ್ಗೆ ಅನುಕಂಪ ಬಂದಿದೆ. ಸಾಮರಸ್ಯ ಹಾಗೂ ಅಭಿವೃದ್ಧಿ ರಾಜಕಾರಣದಿಂದ ಕ್ಷೇತ್ರದಲ್ಲಿ ಮನೆಮಾತಾಗಿರುವ ಸಿ.ಟಿ.ರವಿ ಅವರ ಜನಪ್ರಿಯತೆಯಿಂದ ವಿಚಲಿತರಾಗಿರುವ ಕಾಂಗ್ರೆಸ್ ಮುಖಂಡರು ಎಸಿ ಕೋಣೆಯಲ್ಲೇ ಕುಳಿತು ಸಿ.ಟಿ.ರವಿ, ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ಟೀಕಿಸುವ ಮೂಲಕ ವ್ಯರ್ಥ ಪ್ರಲಾಪಕ್ಕೆ ಕೈ ಹಾಕಿದ್ದಾರೆಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಶಾಸಕರ ವೈಫಲ್ಯಗಳ ಬಗ್ಗೆ ಮಾತನಾಡಲು ಕಾಂಗ್ರೆಸ್ ಮುಖಂಡರಿಗೆ ಯಾವುದೆ ವಿಚಾರಗಳಿಲ್ಲ. ಈ ಕಾರಣಕ್ಕೆ ಅಭಿವೃದ್ಧಿ ಕೆಲಸಗಳಿಗೆ ಕಲ್ಲು ಹಾಕಿ ಕ್ಷೆತ್ರದ ಜನ ವಿರೋಧಕ್ಕೆ ಕಾಂಗ್ರೆಸ್ ಮುಖಂಡರು ಗುರಿಯಾಗಿದ್ದಾರೆ. ಮುತದಾರರಿಗೆ ಮುಖ ತೋರಿಸಲು ಈ ಮುಖಂಡರಿಗೆ ಸಾಧ್ಯವಾಗದೆ ಪರದಾಡುತ್ತಿದ್ದಾರೆಂದು ಆರೋಪಿಸಿದ ಅವರು, ಕಳೆದ ಐದು ವರ್ಷಗಳಿಂದ ಎಸಿ ಕೋಣೆಯಲ್ಲಿ ಕುಳಿತು ಕ್ಷೇತ್ರಕ್ಕೂ ತಮಗೂ ಸಂಬಂಧವಿಲ್ಲ ಎಂಬಂತಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ಈಗ ಚುನಾವಣೆ ಬಂದಿರುವುದರಿಂದ ನಿದ್ದೆಯಿಂದ ಎದ್ದು ಬಂದಿದ್ದಾರೆ. ಕ್ಷೇತ್ರದ ಜನರ ನೀರಿನ ಸಮಸ್ಯೆಗಳ ಬಗ್ಗೆ ಕರುಳು ಕಿತ್ತು ಬಂದವರಂತೆ ಅನುಕಂಪ ತೋರಿಸುತ್ತ ನಾಟಕವಾಡುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತಿದ್ದು, ಚುನಾಣೆಯಲ್ಲಿ ಮತ್ತೊಮ್ಮೆ ಸಿ.ಟಿ.ರವಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ಮತದಾರರು ಮಂಗಳಾರತಿ ಮಾಡುತ್ತಾರೆಂದರು.

ಪ್ರಮೋದ್ ಮುತಾಲಿಕ್ ಅವರು ಈಗ ರಾಜಕಾರಣಿಯಾಗಿ ಬದಲಾಗಿದ್ದಾರೆ. ಅವರಿಗೆ ದತ್ತಪೀಠದ ವಿಚಾರದಲ್ಲಿ ಶಾಸಕ ಸಿ.ಟಿ.ರವಿ ಮಾಡಿದ ಹೋರಾಟದ ಬಗ್ಗೆ ಗೊತ್ತಿದ್ದರೂ ಅಧಿಕಾರಕ್ಕಾಗಿ ಆರೋಪ ಮಾಡುತ್ತಿದ್ದಾರೆ. ದತ್ತಪೀಠದ ಗುಹೆ ಕುಸಿದಿದ್ದ ವೇಳೆ ಅತ್ಯಂತ ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ಮಾಡಿಸಿ ಗುಹೆಯ ಮೂಲ ಸೌಂದರ್ಯಕ್ಕೆ ಧಕ್ಕೆ ಬಾರದರೀತಿಯಲ್ಲೇ ಹಿಂದೂ ಸಮಾಜಕ್ಕೆ ನೀಡಿದ್ದಾರೆ. ಗುಹೆ ಕುಸಿದಿದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯ ಲಾಭಕ್ಕೆ ಹವಣಿಸಿದ್ದವು. ಆಗ ಬಿಜೆಪಿ ಕಾನೂನು ಹೋರಾಟಕ್ಕಿಳಿದಿತ್ತು. ಇದು ಮುತಾಲಿಕ್ ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ ಲೋಕೇಶ್, ಸಿ.ಟಿ.ರವಿ ಅವರು 8 ಕೋ. ರೂ. ಬೆಲೆಯ ಮನೆ ಕಟ್ಟಿಸಿರುವ ಬಗ್ಗೆ ಮುತಾಲಿಕ್ ಬಳ ದಾಖಲೆ ಇದ್ದರೆ ನೀಡಲಿ, ಮುತಾಲಿಕ್ ಅವರನ್ನು ಯಾರೋ ದಾರಿ ತಪ್ಪಿಸುತ್ತಿದ್ದು, ಅವರು ಎಚ್ಚರಿಕೆ ವಹಿಸಬೇಕೆಂದರು.

ಚಿಕ್ಕಮಗಳೂರು ಮತ್ತು ಕಡೂರು ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗೆ ಬಜೆಟ್‍ಗೂ ಮುನ್ನ ಯೋಜನೆ ಸಿದ್ಧಪಡಿಸಿ ಸಿಎಂ ಮುಂದೆ ಅನುದಾನಕ್ಕೆ ಈ ಭಾಗದ ಶಾಸಕರು ಅಂಗಲಾಚಿದ್ದರು. ಆಗ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಿಎಂ ಅನುದಾನ ನೀಡಲು ಒಪ್ಪಿದ್ದಾರೆಂದು ಜನರ ಮುಂದೆ ಹೇಳಿದ್ದರು. ಆದರೆ ಬಜೆಟ್‍ನಲ್ಲಿ ಸಿಎಂ ಈಯೋಜನೆಗೆ ನಯಾ ಪೈಸೆಯನ್ನೂ ನೀಡದೇ ಜಿಲ್ಲೆಯ ಜನರು ನೀರಿಗಾಗಿ ಪರಿತಪಿಸುವಂತೆ ಮಾಡಿದ್ದಾರೆಂದ ಅವರು, ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜಿಗೆ ಕಾಂಗ್ರೆಸ್ ಮುಖಂಡರೇ ಕಲ್ಲು ಹಾಕಿದರು. ಪ್ರತ್ಯೇಕ ಹಾಲು ಒಕ್ಕೂಟ ಜಾರಿಗೂ ತಡೆ ಮಾಡಿದರು. ಕಳಸ ತಾಲೂಕು ಕೇಂದ್ರ ಘೋಷಣೆಗೆ ನಿರ್ಲಕ್ಷ್ಯ ವಹಿಸಿದರು. ಕರಗಡ ಏತ ನೀರಾವರಿ ಯೋಜನೆ ಪೂರ್ಣಗೊಳ್ಳದಿರುವಂತೆ ನಾಟಕವಾಡಿದ ಕಾಂಗ್ರೆಸ್ ಮುಖಂಡರು ಈಗ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಮತದಾರರ ಬಳಿ ಸುಳ್ಳು ಹೇಳಿಕೊಂಡು ನಾಟಕವಡುತ್ತಿದ್ದಾರೆಂದು ಟೀಕಿಸಿದರು.

ಬರೆದುಕೊಟ್ಟ ಭಾಷಣವನ್ನೇ ಸರಿಯಾಗಿ ಓದಲು ಬಾರದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಬಗ್ಗೆ ಟೀಕೆ ಮಾಡಲು ನೈತಿಕತೆ ಇಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರಾಹುಲ್‍ಗಾಂಧಿ ಅಜ್ಜಿ ಇಂದಿರಾಗಾಂಧಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಜಿಲ್ಲೆಯ ನೆನಪಾಗಿರಲಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಅಜ್ಜಿ ಹಾಗೂ ಚಿಕ್ಕಮಗಳೂರು ನೆನಪಾಗಿರುವುದು ವಿಪರ್ಯಾಸ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಯೋಜನೆಗಳಿಂದಾಗಿ ಇಡೀ ದೆಶವೇ ಬಿಜೆಪಿ ಪಕ್ಷವನ್ನು ಎಲ್ಲ ರಾಜ್ಯಗಳಲ್ಲೂ ಅಧಿಕಾರಕ್ಕೆ ತರುತ್ತಿದ್ದಾರೆ. ಆದರೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾತ್ರ ಸಿಎಂ ಭಾವಚಿತ್ರದಿಂದ ಎಲ್ಲೆಡೆ ಕಾಂಗ್ರೆಸ್ ಗೆಲ್ಲಲಿದೆ ಎಂಬ ಭ್ರಮೆಯಲ್ಲಿದ್ದಾರೆ. ಈ ಭಾವಚಿತ್ರದ ಭ್ರಮೆಯಲ್ಲೇ ಕಾಂಗ್ರೆಸ್ ಪಕ್ಷ 22 ರಾಜ್ಯಗಳನ್ನು ಕಳೆದು ಕೊಂಡಿದೆ. ಚಿಕ್ಕಮಗಳೂರು ಜನತೆ ಕಾಂಗ್ರೆಸ್ ಅನ್ನು ತಿರಸ್ಕರಿಸಲು ಸಿಎಂ ಅವರ ಭಾವಚಿತ್ರವೊಂದೇ ಸಾಕು ಎಂದರು.

ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಕಾಫಿ ಬೆಳೆಗಾರರು ಒತ್ತುವರಿ ಮಡಿಕೊಂಡು ಕಂದಾಯ ಜಮೀನನ್ನು ಲೀಸ್‍ಗೆ ಕೊಡಲು ಸರಕಾರ ಮುಂದಾಗಿದೆ ಎಂದಿದ್ದರು. ಆದರೆ ಇದು ಸುಳ್ಳು ಆಶಾಸ್ವನೆಯಾಗಿದ್ದು, ಕಾಫಿ ಬೆಳೆಗಾರರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದ ಅವರು, ಸಿಎಂ ಅವರ ಸಾಲ ಮನ್ನಾ ಘೋಷಣೆ ಬೋಗಸ್ ಆಗಿದೆ. ಬಿಜೆಪಿ ಬಂದರೆ ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುತ್ತಾರೆಂದು ಕಾಂಗ್ರೆಸ್ ಎಲ್ಲೆಡೆ ಅಪಪ್ರಚಾರ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರವೇ ಅತೀ ಹೆಚ್ಚು ಅನುದಾನ ನೀಡುತ್ತಿರುವುದರಿಂದ ಬಿಜೆಪಿ ಬಡವರ ಹೊಟ್ಟೆಗೆ ಹೊಡೆಯುವ ಪಕ್ಷವಲ್ಲ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಡರಾದ ಕೋಟೆ ರಂಗನಾಥ್, ವರಸಿದ್ದಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿನ ಕೋಮು ಸೌಹಾರ್ದವನ್ನು ಕೋಮುಸೌಹಾರ್ದ ವೇದಿಕೆ ಹಾಳುಗೆಡವುತ್ತಿದೆ. ಈ ಸಂಘಟನೆಯ ಹಿಂದೆ ಕಾಂಗ್ರೆಸ್‍ ಇದೆ. ಹಾಗಾಗಿ ಕೋಮುಸೌಹಾರ್ದ ವೇದಿಕೆ ಕಾಂಗ್ರೆಸ್‍ನ ಬಿ ಟೀಮ್ ಆಗಿದೆ. ದತ್ತಪೀಠದ ವಿಚಾರದಲ್ಲಿ ಈ ಸಂಘಟನೆ ವಿನಾಕಾರಣ ಮೂಗು ತೂರಿಸುತ್ತ ಸೌಹಾರ್ದಕ್ಕೆ ಭಂಗ ತರುವ ಕೆಲಸವನ್ನು ಈ ಹಿಂದೆ ಮಾಡಿತ್ತು. ಈಗ ಬಿಜೆಪಿ ಪಕ್ಷ ಹಾಗೂ ಪ್ರಧಾನಿ ಅವರನ್ನು ಟೀಕಿಸುವ ಮೂಲಕ ಕಾಂಗ್ರೆಸ್ ಮಾಡುವ ಕೆಲಸವನ್ನು ಮಾಡುತ್ತಿದೆ. ಕೋಮುಸೌಹಾರ್ದ ವೇದಿಕೆ ಜಿಲ್ಲೆಯ ಸೌಹಾರ್ದದ ಮೇಲೆ ದಾಳಿ ಮಾಡುತ್ತಿದೆ.

- ಸಿ.ಎಚ್.ಲೋಕೇಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News