ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸಚಿವ ಎ.ಮಂಜು ವಿರುದ್ಧ ಎಫ್.ಐ.ಆರ್ ದಾಖಲು

Update: 2018-04-05 17:35 GMT

ಹಾಸನ,ಎ.05: ನೀತಿಸಂಹಿತೆ ಜಾರಿ ಬಳಿಕವೂ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಸರ್ಕಾರಿ ಕಟ್ಟಡ ಬಳಸಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ನಗರ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಹಾಸನ ತಾಲೂಕು ಚುನಾವಣಾಧಿಕಾರಿ ರಾಜೇಶ್ ಅವರು ಹಾಸನ ನಗರ ಠಾಣೆಗೆ ದೂರು ನೀಡಿದ್ದು ಇದೀಗ ನಗರ ಠಾಣೆ ಪೊಲೀಸರು ಐ.ಪಿ.ಸಿ ಸೆಕ್ಷನ್ 188ರ ಅಡಿಯಲ್ಲಿ ನೀತಿ ಸಂಹಿತೆ ಪ್ರಕರಣ ದಾಖಲು ಮಾಡಿದ್ದಾರೆ. ಸರ್ಕಾರಿ ಕಟ್ಟಡವನ್ನು ದುರ್ಬಳಕೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಗರದ ಪ್ರವಾಸಿ ಮಂದಿರ ದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕವೂ ಅಲ್ಲಿದ್ದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರ ಬಗ್ಗೆ ಸ್ಪಷ್ಟನೆ ನೀಡುವಂತೆ ಉಸ್ತುವಾರಿ ಸಚಿವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್‍ಗೆ ಸಮರ್ಪಕವಾದ ಉತ್ತರ ಬಾರದ ಹಿನ್ನಲೆಯಲ್ಲಿ ಹಾಗು ಚುನಾವಣಾ ನೀತಿ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಲು ಯೋಗ್ಯವೆಂದಿರುವ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶದಂತೆ ಇದೀಗ ಎಫ್.ಐ.ಆರ್. ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News