ಮಂಡ್ಯ: ಕೆ.ಎಸ್.ಪುಟ್ಟಣ್ಣಯ್ಯಗೆ ನುಡಿನಮನ; ರೈತ ಚೇತನ ಕೃತಿ ಬಿಡುಗಡೆ

Update: 2018-04-05 17:55 GMT

ಮಂಡ್ಯ, ಎ.5: ರೈತ ಸಮೂಹ ಸರಕಾರಗಳಿಗೆ ಗುಲಾಮರಾಗದೆ ರಾಜಕೀಯವಾಗಿ ಶಕ್ತಿ ಗಳಿಸುವ ಮೂಲಕ ಸರಕಾರದ ಲಗಾಮನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕು ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷ ಯೋಗೇಂದ್ರ ಯಾದವ್ ಕರೆ ನೀಡಿದ್ದಾರೆ.

ರೈತಸಂಘದ ವತಿಯಿಂದ ನಗರದ ರೈತಸಭಾಂಗಣದಲ್ಲಿ ಗುರುವಾರ ನಡೆದ ಕೆ.ಎಸ್.ಪುಟ್ಟಣ್ಣಯ್ಯ ಅವರ ನುಡಿನಮನ ಹಾಗೂ ರೈತ ಚೇತನ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರೈತಸಂಘಟನೆಗೆ ವಿಚಾರ, ಸಂಘರ್ಷ ಹಾಗೂ ರಾಜನೀತಿ ಅಗತ್ಯವಿದೆ. ವೈಚಾರಿಕ ಮನೋಭಾವನೆ ಬೆಳೆಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ರೂಪಿಸಬೇಕು. ಜತೆಗೆ, ರಾಜಕೀಯ ಶಕ್ತಿ ಗಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು. ಇಂದು ಕೃಷಿ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಸರಿಯಾದ ಬೆಲೆ ಇಲ್ಲದೆ ರೈತ ಬೆಳೆದ ಬೆಳೆಯನ್ನು ನಿರ್ದಯವಾಗಿ ಕತ್ತರಿಸಿ ಹಾಕುತ್ತಿದ್ದಾನೆ. ತನ್ನ ಮಗನನ್ನು ರೈತನಾಗಿಸಲು ರೈತ ಬಯಸುತ್ತಿಲ್ಲ, ರೈತನ ಮಗ ರೈತನಾಗಲು ಇಷ್ಟಪಡುತ್ತಿಲ್ಲ ಎಂದು ಅವರು ವಿಷಾದಿಸಿದರು.

ರೈತನ ಬೆಳೆಗೆ ಕಾನೂನು ಬದ್ದ ಬೆಂಬಲ ಬೆಲೆ ನಿಗದಿಯಾಗಬೇಕು. ರೈತರ ಆತ್ಮಹತ್ಯೆ ನಿಲ್ಲಬೇಕು. ಈ ನಿಟ್ಟಿನಲ್ಲಿ ದೇಶದ 198 ರೈತಸಂಘಟನೆಗಳು ಒಗ್ಗೂಡಿ ಹೋರಾಟ ರೂಪಿಸಬೇಕೆಂದು ಪುಟ್ಟಣ್ಣಯ್ಯ ಪ್ರಯತ್ನಿಸಿದ್ದರು ಎಂದು ಅವರು ಸ್ಮರಿಸಿದರು.

ಸದನದ ಹೊರಗೆ ಒಳಗೆ ರೈತರಿಗಾಗಿ ಹೋರಾಡಿದರು. ಎರಡು ಬಾರಿ ಮಂತ್ರಿಗಿರಿಗೆ ಆಹ್ವಾನ ಬಂದಿದ್ದರೂ ರಾಜಿಮಾಡಿಕೊಳ್ಳದೆ ರೈತ ಚಳವಳಿಯ ಸಿದ್ದಾಂತಕ್ಕೆ ಬದ್ದರಾಗಿದ್ದರು. ಕ್ಷೇತ್ರದ ಜನರ ಅಚ್ಚುಮೆಚ್ಚಿನ ನಾಯಕರಾಗಿದ್ದರು ಎಂದು ಅವರು ತಿಳಿಸಿದರು. ಪುಟ್ಟಣ್ಣಯ್ಯ ಅವರ ಫೋಟೋ, ಕ್ಯಾಲೆಂಡರ್‍ಗಳನ್ನು ಮನೆಗಳಲ್ಲಿ ಹಾಕಿಕೊಳ್ಳಲಾಗಿದೆ. ಸಂತೋಷ. ಆದರೆ, ಅವರ ವಿಚಾರಗಳನ್ನು ತಮ್ಮ ವಿಚಾರಗಳನ್ನಾಗಿ ಮಾಡಿಕೊಂಡು ಅವರ ಕನಸು ನನಸು ಮಾಡುವುದೇ ನಿಜವಾದ ಶ್ರದ್ಧಾಂಜಲಿ ಎಂದು ಯಾದವ್ ಕಿವಿಮಾತು ಹೇಳಿದರು. ಸ್ವರಾಜ್ ಇಂಡಿಯಾ ಅಭ್ಯರ್ಥಿಯಾದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಮನವೊಲಿಸಬೇಕು. ಜತೆಗೆ, ಮದ್ದೂರು ಕ್ಷೇತ್ರದ ಲಿಂಗೇಗೌಡರನ್ನೂ ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.

ಸಾಹಿತಿ ದೇವನೂರು ಮಹಾದೇವ ಮಾತನಾಡಿ, ಪುಟ್ಟಣ್ಣಯ್ಯ ದುದ್ದ ಹೋಬಳಿಗೆ ಕುಡಿಯುವ ನೀರನ್ನು ತರಲು ಏಳು ಕೆರೆ ನೀರನ್ನು ಕುಡಿದಿದ್ದಾರೆ, ಕಣ್ಣೀರು ಹಾಕಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ತಮ್ಮ ಮಾವನವರ ಶವಸಂಸ್ಕಾರಕ್ಕೂ ಹೋಗಲಿಲ್ಲ ಎಂದು ಸ್ಮರಿಸಿದರು.

ನನ್ನ ಮನಸ್ಸು ಗೊಂದಲದಲ್ಲಿದೆ. ಪುಟ್ಟಣ್ಣಯ್ಯ ಇಲ್ಲ ಎಂದುಕೊಳ್ಳುವುದಕ್ಕೆ ನನ್ನ ಮನಸ್ಸಿಗೆ ಕಷ್ಟವಾಗುತ್ತಿದೆ. ಶ್ರದ್ಧಾಂಜಲಿ ಸಭೆಗಳಲ್ಲಿ ಭಾಗವಹಿಸುವುದೆಂದರೆ ಹೆಚ್ಚು ಕಸಿವಿಸಿಯಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ನಾನು ಮಾಡಿದಷ್ಟು ಭಾಷಣ ಬೇರೆ ಯಾವ ಜಿಲ್ಲೆಯಲ್ಲೂ ಮಾಡಿಲ್ಲ. ಇದಕ್ಕೆ ಕಾರಣ ಪುಟ್ಟಣ್ಣಯ್ಯನವರೊಡನೆ ನನಗಿದ್ದ ಭಾವನಾತ್ಮಕ ಸಂಬಂಧ ಎಂದು ಅವರು ಭಾವುಕರಾದರು.

ಪತ್ರಕರ್ತ ರವಿ ಪಾಂಡವಪುರ ವಿರಚಿತ ರೈತ ಚೇತನ ಕೃತಿ ಕುರಿತು ಮಾತನಾಡಿದ ಸುದ್ದಿ ಟಿವಿ ಪ್ರಧಾನ ಸಂಪಾದಕ ಶಶಿಧರ್ ಭಟ್, ಕಾವು ಕಳೆದುಕೊಂಡಿರುವ ದಲಿತ, ರೈತ ಚಳವಳಿಗಳು ಮತ್ತೆ ಬಲಯುತವಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.

ಪ್ರೊ.ಕೆ.ಸಿ.ಬಸವರಾಜ್, ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಮ್ಜದ್ ಪಾಷ, ಬಡಗಲಪುರ ನಾಗೇಂದ್ರ, ನ.ಲಿ.ಕೃಷ್ಣ, ಡಾ.ವಾಸು, ಎಂ.ಬಿ.ನಾಗಣ್ಣಗೌಡ, ಇತರರು ಪುಟ್ಟಣ್ಣಯ್ಯ ಅವರನ್ನು ಸ್ಮರಿಸಿದರು.

ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಅಧ್ಯಕ್ಷತೆವಹಿಸಿದ್ದರು. ಶಂಭೂನಹಳ್ಳಿ ಸುರೇಶ್, ಬಿ.ಬೊಮ್ಮೇಗೌಡ, ಕೆ.ಟಿ.ಗಂಗಾಧರ್, ಯಧುಶೈಲಾ ಸಂಪತ್, ಕೆಂಪೂಗೌಡ, ಇತರ ಗಣ್ಯರು ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News