ಶೀಘ್ರದಲ್ಲಿಯೇ ಸಹಾಯವಾಣಿ ಮತ್ತು ಮಾಹಿತಿ ಕೇಂದ್ರ ಸ್ಥಾಪನೆ: ತುಮಕೂರು ಜಿಲ್ಲಾಧಿಕಾರಿ

Update: 2018-04-06 12:13 GMT

ತುಮಕೂರು,ಎ.03: ಸಭೆ,ಸಮಾರಂಭ, ರ್ಯಾಲಿ, ಮತ್ತಿತರ ವಿಷಯಗಳ ಬಗ್ಗೆ ಅನುಮತಿ ಪಡೆಯಲು ಹಾಗೂ ಸಾರ್ವಜನಿಕರ ಸಹಾಯಕ್ಕಾಗಿ ಸಹಾಯವಾಣಿ ಹಾಗೂ ಮಾಹಿತಿ ಕೇಂದ್ರವನ್ನು ಜಿಲ್ಲೆಯ ಎಲ್ಲಾ ಆರ್‍ಓ ಕಛೇರಿಗಳಲ್ಲಿ ಶೀಘ್ರವೇ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‍ರಾಜ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳಿಗೆ ಅನುಮತಿ, ರ್ಯಾಲಿಗಳಿಗೆ ಅನುಮತಿ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಎಲ್ಲಾ ಅನುಮತಿಗಳನ್ನು ಶೀಘ್ರವಾಗಿ ಪಡೆಯಲು ಏಕಗವಾಕ್ಷಿ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ಸುಗಮ, ಸುವಿಧ ಎಂಬ ಆ್ಯಪ್ಸ್‍ಗಳನ್ನು ಹಾಗೂ ಸಾರ್ವಜನಿಕರ ದೂರುಗಳನ್ನು ದಾಖಲಿಸಲು ಸಮಾಧಾನ್ ಆ್ಯಪ್ ಆಯೋಗ ಸಿದ್ಧಪಡಿಸಿದ್ದು, ಶೀಘ್ರವೇ ಬಳಕೆ ಮಾಡಲಾಗುವುದು ಎಂದರು.  

ಚುನಾವಣೆ ಅಧಿಸೂಚನೆ ಆಗುವವರೆಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಅನುಮತಿ ನೀಡಲಾಗುತ್ತಿದೆ. ಆನಂತರ ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಆರ್‍ಓ ಕಛೇರಿಗಳಲ್ಲಿ ಅನುಮತಿ ನೀಡಲಾಗುತ್ತದೆ ಎಂದ ಜಿಲ್ಲಾಧಿಕಾರಿ ಗಳು, ಬರುವ 2-3 ದಿನಗಳಲ್ಲಿ ಸಹಾಯ ವಾಣಿ ಕೇಂದ್ರ ಹಾಗೂ ಏಕಗವಾಕ್ಷಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ವಿವಿಧ ಉದ್ದೇಶಗಳಿಗೆ ಅನುಮತಿ ಪಡೆಯಲು ಕನಿಷ್ಠ 2 ದಿನಗಳ ಮುಂಚಿತವಾಗಿ ಪ್ರಸ್ತಾವೆ ಸಲ್ಲಿಸಿದರೆ, ಅನುಮತಿ ನೀಡಲು ಸಹಾಯಕವಾಗುತ್ತದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆಧ್ಯತೆ ಎಂಬ ನಿಯಮವನ್ನು ಪಾಲಿಸಿ, ಅನುಮತಿಯನ್ನು ನೀಡಲಾಗುವುದು ಎಂದು ಹೇಳಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಶೇಖರ್, ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್, ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ:ಕೆ.ರಾಮೇಶ್ವರಪ್ಪ, ಜಂಟಿ ಲೆಕ್ಕ ನಿಯಂತ್ರಕ ರೇವಣ್ಣ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News