ಅಯೋಧ್ಯೆ ಪ್ರಕರಣ ಉನ್ನತ ಪೀಠಕ್ಕೆ ವರ್ಗಾಯಿಸಲು ಮನವಿ

Update: 2018-04-06 16:02 GMT

ಹೊಸದಿಲ್ಲಿ, ಎ.6: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷ(ತಂಡ)ಗಳ ಹೇಳಿಕೆ ಆಲಿಸಿದ ಬಳಿಕವಷ್ಟೇ ವಿಚಾರಣೆಯನ್ನು ನ್ಯಾಯಾಲಯದ ಉನ್ನತ ಪೀಠಕ್ಕೆ ವರ್ಗಾಯಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಮುಸ್ಲಿಮ್ ಸಮುದಾಯದಲ್ಲಿರುವ ಬಹುಪತ್ನಿತ್ವ ಪ್ರಕರಣಕ್ಕಿಂತಲೂ ಅಯೋಧ್ಯೆ ಪ್ರಕರಣ ಹೆಚ್ಚಿನ ಮಹತ್ವದ್ದಾಗಿರುವ ಕಾರಣ ಪ್ರಕರಣದ ತ್ವರಿತ ವಿಚಾರಣೆಯ ದೃಷ್ಟಿಯಿಂದ ಇದನ್ನು ಉನ್ನತ ಪೀಠಕ್ಕೆ ವರ್ಗಾಯಿಸಬೇಕು. ದೇಶವು ಈ ಸಮಸ್ಯೆಗೆ ಪರಿಹಾರ ಬಯಸುತ್ತದೆ ಎಂದು ಮುಸ್ಲಿಮ್ ತಂಡಗಳ ಪರ ಹಿರಿಯ ವಕೀಲ ರಾಜೀವ್ ಧವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಎಪ್ರಿಲ್ 27ಕ್ಕೆ ನಿಗದಿಗೊಳಿಸಿದೆ.

ಅಯೋಧ್ಯೆ ವಿವಾದದ ಬಗ್ಗೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ, ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ರಾಮ್‌ಲಲ್ಲಾ ಹಾಗೂ ನಿರ್ಮೋಹಿ ಅಖಾಡ - ಈ ಮೂರು ಪಕ್ಷಗಳೊಳಗೆ ಸಮವಾಗಿ ಪಾಲು ಮಾಡಬೇಕೆಂದು ಸೂಚಿಸಿತ್ತು. ಈ ತೀರ್ಪನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ 14 ಅರ್ಜಿ ಸಲ್ಲಿಸಲಾಗಿದೆ.

ಈ ಮಧ್ಯೆ, ವಿವಾದಕ್ಕೆ ಸಂಬಂಧಿಸಿ ಮೂಲ ಅರ್ಜಿದಾರರಿಗೆ ಮಾತ್ರ ಹೇಳಿಕೆ ನೀಡಲು ಅವಕಾಶ ಮಾಡಿಕೊಡಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಬಾಬರಿ ಮಸೀದಿ ನಿರ್ಮಿಸಲಾಗಿರುವ ವಿವಾದಿತ 2.7 ಎಕ್ರೆ ಪ್ರದೇಶವು ಸುನ್ನಿ ವಕ್ಫ್ ಮಂಡಳಿಗೆ ಸೇರಿದೆಯೇ ಅಥವಾ ಅಖಿಲ ಭಾರತ ಹಿಂದೂ ಮಹಾಸಭಾಕ್ಕೆ ಸೇರಿದೆಯೇ ಎಂಬ ಬಗ್ಗೆ ವಿವಾದವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News