ದಕ್ಷಿಣ ಕೊರಿಯ ಮಾಜಿ ಅಧ್ಯಕ್ಷೆಗೆ 24 ವರ್ಷ ಜೈಲು

Update: 2018-04-06 17:26 GMT

ಸಿಯೋಲ್ (ದಕ್ಷಿಣ ಕೊರಿಯ), ಎ. 6: ಭ್ರಷ್ಟಾಚಾರ ಪ್ರಕರಣದಲ್ಲಿ, ದಕ್ಷಿಣ ಕೊರಿಯದ ಮಾಜಿ ಅಧ್ಯಕ್ಷೆ ಪಾರ್ಕ್ ಗುನ್ ಹೇಗೆ ಶುಕ್ರವಾರ 24 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

10 ತಿಂಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯ ಕೊನೆಯಲ್ಲಿ, ಲಂಚ ಸ್ವೀಕಾರ ಮತ್ತು ಅಧಿಕಾರ ದುರ್ಬಳಕೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಪಾರ್ಕ್ ದೋಷಿಯಾಗಿದ್ದಾರೆ.

 ‘‘ತನ್ನ ಸ್ನೇಹಿತೆ ಚೋಯಿ ಸೂನ್-ಸಿಲ್ ಜೊತೆಗೆ ಸೇರಿ ಆರೋಪಿ ಸ್ವೀಕರಿಸಿರುವ ಹಾಗೂ ಬೇಡಿಕೆ ಸಲ್ಲಿಸಿರುವ ಮೊತ್ತ 23 ಬಿಲಿಯ ವನ್ (ಸುಮಾರು 140 ಕೋಟಿ ರೂಪಾಯಿ) ಆಗಿದೆ’’ ಎಂದು ನ್ಯಾಯಾಧೀಶ ಕಿಮ್ ಸೆ-ಯೂನ್ ಹೇಳಿದರು.

‘‘ಆರೋಪಿಗೆ ನಾನು 24 ವರ್ಷಗಳ ಜೈಲು ಶಿಕ್ಷೆ ಮತ್ತು 18 ಬಿಲಿಯ ವನ್ (ಸುಮಾರು 109 ಕೋಟಿ ರೂಪಾಯಿ) ದಂಡ ವಿಧಿಸುತ್ತೇನೆ’’ ಎಂದು ನ್ಯಾಯಾಧೀಶರು ಘೋಷಿಸಿದರು.

ತನ್ನನ್ನು ಕಸ್ಟಡಿಯಲ್ಲಿರಿಸಿರುವುದನ್ನು ಪ್ರತಿಭಟಿಸಿ 66 ವರ್ಷದ ಪಾರ್ಕ್ ವಿಚಾರಣೆಯ ಹೆಚ್ಚಿನ ಭಾಗವನ್ನು ಬಹಿಷ್ಕರಿಸಿದ್ದರು. ಶುಕ್ರವಾರ ತೀರ್ಪು ಪ್ರಕಟವಾಗುವಾಗಲೂ ಅವರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.

ಅದೇ ವೇಳೆ, ಅಪರೂಪವೆಂಬಂತೆ, ತೀರ್ಪು ಘೋಷಣೆಯನ್ನು ಟಿವಿಯಲ್ಲಿ ನೇರಪ್ರಸಾರಗೊಳಿಸಲಾಯಿತು.

ನಾಲ್ಕೇ ವರ್ಷಗಳಲ್ಲಿ ಪತನ

 ಹತ್ಯೆಗೊಳಗಾದ ಸರ್ವಾಧಿಕಾರಿ ಪಾರ್ಕ್ ಚುಂಗ್-ಹೀಯ ಮಗಳಾಗಿರುವ ಪಾರ್ಕ್ 2013ರಲ್ಲಿ ಅಧಿಕಾರಕ್ಕೆ ಬಂದರು. ತನ್ನನ್ನು ದೇಶದ ಪುತ್ರಿ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೇರಿದ ಅವರು, ತನ್ನನ್ನು ಭ್ರಷ್ಟಗೊಳಿಸಲು ಸಾಧ್ಯವಿಲ್ಲ ಹಾಗೂ ತಾನು ಯಾರ ಮುಲಾಜಿನಲ್ಲಿಯೂ ಇಲ್ಲ ಎಂದು ಘೋಷಿಸಿಕೊಂಡಿದ್ದರು.

ಆದರೆ, 4 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಅವರ ವಿರುದ್ಧ ದೋಷಾರೋಪ ಹೊರಿಸಲಾಯಿತು, ಅವರ ಎಲ್ಲ ಅಧಿಕಾರಿಗಳನ್ನು ಕಿತ್ತುಕೊಳ್ಳಲಾಯಿತು ಹಾಗೂ ಅವರನ್ನು ಅಧಿಕಾರದಿಂದ ಉಚ್ಚಾಟಿಸಲಾಯಿತು. ಅವರ ವಿರುದ್ಧ ರಾಜಧಾನಿ ಸಿಯೋಲ್ ಮತ್ತು ಇತರ ನಗರಗಳಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟಿಸಿದರು.

ಜನರ ಹೆಚ್ಚಿನ ಪ್ರತಿಭಟನೆ ಚೋಯಿ ಜೊತೆಗಿನ ಪಾರ್ಕ್‌ರ ಸಂಬಂಧದ ವಿರುದ್ಧವಾಗಿತ್ತು. ಸರಕಾರದಲ್ಲಿ ಯಾವುದೇ ಹುದ್ದೆ ಹೊಂದಿರದಿದ್ದ ಚೋಯಿ ಸರಕಾರದ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಉನ್ನತ ಮಟ್ಟದ ನೇಮಕಾತಿಗಳು ಮತ್ತು ಸರಕಾರಿ ಭಾಷಣಗಳ ತಿದ್ದುವಿಕೆಯಲ್ಲಿ ಅವರು ಹಸ್ತಕ್ಷೇಪ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News