ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆಯ ತಂದೆಯ ಶಂಕಾಸ್ಪದ ಸಾವು

Update: 2018-04-09 09:45 GMT

ಲಕ್ನೋ, ಎ.9: ಬಿಜೆಪಿ ಶಾಸಕ ಮತ್ತವನ ಸಹವರ್ತಿಗಳು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿ  ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ತಂದೆ ಸುರೇಂದ್ರ ಸಿಂಗ್ ಪಪ್ಪು ಉನ್ನಾವ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾ ಕಾರಾಗೃಹದಿಂದ ಸ್ಥಳಾಂತರಿಸಿದ ನಂತರ ಸಾವಿಗೀಡಾಗಿದ್ದಾರೆಂದು ಹೇಳಲಾಗಿದೆ.

ಉನ್ನಾಂವ್ ನ ಬಂಗಮಾವ್ ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತಾತನ ಸಹವರ್ತಿಗಳು ತನ್ನ ಮೇಲೆ ಜುಲೈ 4, 2017ರಂದು ಅತ್ಯಾಚಾರವೆಸಗಿದ್ದರು. ಈ ಬಗ್ಗೆ ಪೊಲೀಸ್ ದೂರು ನೀಡಿದ್ದರೂ ಸಿಂಗ್ ಹೆಸರನ್ನು ಎಫ್‍ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದರು.

ಅತ್ಯಾಚಾರ ಪ್ರಕರಣದ ನಂತರ ಶಾಸಕನ ಸಹವರ್ತಿಗಳ ಭಯದಿಂದ ದಿಲ್ಲಿಗೆ ವಾಸ ಬದಲಾಯಿಸಿದ್ದೆ. ಎಪ್ರಿಲ್ 3ರಂದು ದಿಲ್ಲಿಯಿಂದ ಹಿಂದಿರುಗಿದಾಗ ಶಾಸಕನ ಸಹವರ್ತಿಗಳು ತಂದೆಯ ಮೇಲೆ ಹಲ್ಲೆಗೈದಿದ್ದರಲ್ಲದೆ ಅವರಿಗೆ ಸತತ ಕಿರುಕುಳ ನೀಡಿದ್ದರೆಂದು ಮಹಿಳೆ ಆರೋಪಿಸಿದ್ದಾರೆ. ಟಿಂಕು ಸಿಂಗ್ ಎಂಬಾತ ದೂರೊಂದನ್ನು ದಾಖಲಿಸಿ ಸುರೇಂದ್ರ ಸಿಂಗ್ ಕೆಲ ಜನರನ್ನು ನಿಂದಿಸಿ ದೇಶೀಯ ನಿರ್ಮಿತ ಪಿಸ್ತೂಲಿನಿಂದ ಅವರನ್ನು ಬೆದರಿಸುತ್ತಿದ್ದನೆಂದು ಆರೋಪಿಸಿದ ನಂತರ ಆತನನ್ನು ಬಂಧಿಸಲಾಗಿತ್ತು.

ಆದರೆ ಶಾಸಕನ ಸೋದರ ಅತುಲ್ ಸಿಂಗ್ ಮತ್ತಾತನ ಸಹವರ್ತಿಗಳು ತನ್ನ ಮೇಲೆ ಹಲ್ಲೆಗೈದು ಪೊಲೀಸರಿಗೆ ಹಸ್ತಾಂತರಿಸಿದ್ದರು ಎಂದು ಸುರೇಂದ್ರ ಸಿಂಗ್ ದೂರಿದ್ದರು. ಪೊಲೀಸರ ಮೇಲೆ ಒತ್ತಡ ಹೇರಿ ತನ್ನ ವಿರುದ್ಧ ದೂರು ದಾಖಲಿಸಲಾಗಿತ್ತೆಂದೂ ಆರೋಪಿಸಿದ್ದರು. ಬಂಧನದ ಸಂದರ್ಭ ಸುರೇಂದ್ರ ಸಿಂಗ್ ದೇಹದಲ್ಲಿ ಗಾಯದ ಗುರುತುಗಳಿದ್ದವು. ಅವುಗಳಿಗೆ ಚಿಕಿತ್ಸೆ ನೀಡಿ ಎಪ್ರಿಲ್ 6ರಂದು ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಆದರೆ ರವಿವಾರ ಸಂಜೆ ಮಹಿಳೆಯ ತಂದೆ ಸುರೇಂದ್ರ ಸಿಂಗ್ ಪ್ರಜ್ಞೆ ತಪ್ಪಿ ಬಿದ್ದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಹೊಟ್ಟೆ ನೋವಿನಿಂದ ಅವರು ಬಳಲುತ್ತಿದ್ದರು ಹಾಗೂ ವಾಂತಿ ಮಾಡುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಮಾಖಿ ಎಂಬಲ್ಲಿನ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಲಾಗಿದೆ. ಘಟನೆ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ದೂರಿನಲ್ಲಿ ಶಾಸಕನ ಸೋದರನ ಹೆಸರು ಕೈಬಿಟ್ಟ ವಿಚಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉನ್ನಾಂವ್ ಎಸ್‍ಪಿ ಪುಷ್ಪಾಂಜಲಿ ದೇವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News