ಸಂಸತ್ ಕಲಾಪ ಹಳ್ಳ ಹಿಡಿಯಲು ಯಾರು ಕಾರಣ?

Update: 2018-04-10 18:45 GMT

ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ, ಆದರೆ ಅದರಿಂದ ದೊರೆಯುವ ರಾಜಕೀಯ ಲಾಭದ ಅಧಿಕಾರವನ್ನು ಬಳಸಿಕೊಂಡು ತನ್ನದೇ ಅಜೆಂಡಾ ಜಾರಿಗೆ ತರಲು ಹೊರಟ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಸಂಸತ್‌ನ ಇತ್ತೀಚಿನ ಕಲಾಪಗಳೇ ಉದಾಹರಣೆ. ಸಂಸತ್ತಿನ ಇತ್ತೀಚಿನ ಮುಂಗಡ ಪತ್ರ ಅಧಿವೇಶನ ಯಾವುದೇ ಅರ್ಥಪೂರ್ಣ ಕಲಾಪ ನಡೆಯದೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಸಂಸತ್ ಅಧಿವೇಶನದಲ್ಲಿ ನಡೆದ ನಿರಂತರ ಕೋಲಾಹಲದಿಂದಾಗಿ ಕಲಾಪ ನಡೆಸಲು ಸಾಧ್ಯವಾಗಲೇ ಇಲ್ಲ. ಸಂಸತ್ ಕಲಾಪ ಈ ರೀತಿ ಕೋಲಾಹಲದಲ್ಲಿ ಮುಳುಗಿ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಉದಾಹರಣೆಗಳು ಸಾಕಷ್ಟಿವೆ. ಕೇಂದ್ರದಲ್ಲಿ ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದಾಗಲೂ ಬಿಜೆಪಿ ಸದಸ್ಯರು ಸದನದ ಕಲಾಪ ನಡೆಯದಂತೆ ಮಾಡಿ ಅನೇಕ ಬಾರಿ ಅಧಿವೇಶನ ಮುಂದೂಡಿದ ಉದಾಹರಣೆಗಳು ಇವೆ.

ಆದರೆ, ಈ ಬಾರಿ ಸಂಸತ್‌ನ ಬಜೆಟ್ ಅಧಿವೇಶನ ಮುಂದೂಡಲ್ಪಟ್ಟ ರೀತಿ ಮಾತ್ರ ಅತ್ಯಂತ ಖಂಡನೀಯ ವಾಗಿದೆ. ಈ ಬಾರಿಯ ಅಧಿವೇಶನ ಮುಂದೂಡಲು ಪ್ರತಿಪಕ್ಷ ಸದಸ್ಯರ ಕೋಲಾಹಲ ಮಾತ್ರ ಕಾರಣವಲ್ಲ, ಮೋದಿ ಸರಕಾರದ ನಕಾರಾತ್ಮಕ ವರ್ತನೆಯೂ ಕಾರಣ. ಸದನದ ಕಲಾಪವನ್ನು ಸುಗಮವಾಗಿನಡೆಸಿಕೊಂಡು ಹೋಗಬೇಕಾದ ಆಡಳಿತ ಪಕ್ಷವೇ ಈ ಬಾರಿ ಕಲಾಪ ಅಸ್ತವ್ಯಸ್ತವಾಗಲು ಕಾರಣ ವಾಯಿತು. ಕೋಲಾಹಲದಲ್ಲಿ ಮುಳುಗಿದ ಸದನದ ಕಲಾಪವನ್ನು ಮತ್ತೆ ಸುಸ್ಥಿತಿಗೆ ತರಲು ಸರಕಾರ ಸಕಾರಾತ್ಮಕ ಪಾತ್ರ ವಹಿಸಬೇಕಾಗಿತ್ತು. ಹಿಂದೆಲ್ಲ ಇಂತಹ ಸನ್ನಿವೇಶ ಉಂಟಾದಾಗ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ನಡೆದು ರಾಜೀಸೂತ್ರ ರೂಪಿಸಿ ಸದನದ ಕಲಾಪ ಮತ್ತೆ ಯಥಾ ಸ್ಥಿತಿ ನಡೆಯಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ, ಈ ಬಾರಿ ಹಾಗಾಗಲಿಲ್ಲ. ಇದರ ಪರಿಣಾಮವಾಗಿ ಸುಮಾರು 89 ಲಕ್ಷ ಕೋಟಿ ರೂ. ಮೊತ್ತದ ಮುಂಗಡ ಪತ್ರ ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲ್ಪಟ್ಟಿತು. ಚರ್ಚೆ ಇಲ್ಲದೇ ಇಂತಹ ದೊಡ್ಡ ಮೊತ್ತದ ಬಜೆಟ್ ಅಂಗೀಕರಿಸಿದ್ದು ಇದೇ ಮೊದಲು. ಈ ಬಾರಿ ಸಂಸತ್ ಅಧಿವೇಶನದಲ್ಲಿ ಹಲವಾರು ಪ್ರಶ್ನೆಗಳನ್ನೆತ್ತಿಕೊಂಡು ಪ್ರತಿಪಕ್ಷಗಳು ಕೋಲಾಹಲದ ವಾತಾವರಣದ ನಿರ್ಮಿಸಿದ್ದು ನಿಜ.

ಇದರೊಂದಿಗೆ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ಉದ್ದೇಶಿಸಿದ್ದವು. ಈ ಕುರಿತು ಲೋಕಸಭಾ ಅಧ್ಯಕ್ಷರಿಗೆ ಅವಿಶ್ವಾಸ ನಿರ್ಣಯ ಮಂಡನೆಯ ಕುರಿತು ಪ್ರಸ್ತಾವನೆ ಸಲ್ಲಿಸಿದ್ದವು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ. ಅವಿಶ್ವಾಸ ನಿರ್ಣಯ ಮಂಡನೆಯಿಂದ ಸರಕಾರ ಉರುಳಿ ಹೋಗುವ ಪರಿಸ್ಥಿತಿಯೂ ಇರಲಿಲ್ಲ. ಆದರೆ, ಅವಿಶ್ವಾಸ ನಿರ್ಣಯ ಮಂಡನೆಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ಇದರಿಂದಾಗಿ ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣ ಮಾಡಿದವು. ಇದರಿಂದ ಸದನದ ಕಲಾಪ ಹಳ್ಳ ಹಿಡಿಯಿತು. ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಎನ್‌ಡಿಎ ಮಿತ್ರ ಪಕ್ಷವಾದ ತೆಲುಗು ದೇಶಂ ಸರಕಾರದ ವಿರುದ್ಧ ತಿರುಗಿ ಬಿದ್ದಿತ್ತು. ಎನ್‌ಡಿಎ ಮೈತ್ರಿ ಕೂಟದಿಂದ ಹೊರಗೆ ಬರುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಕಟಿಸಿದ್ದರು. ಇವೆಲ್ಲ ಅಂಶಗಳಿಂದಾಗಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಿದ್ದರೆ ಸದನದಲ್ಲಿ ಸರಕಾರ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಸ್ಪೀಕರ್ ಅವಕಾಶವನ್ನೇ ನೀಡಲಿಲ್ಲ. ಲೋಕಸಭಾಧ್ಯಕ್ಷರ ಪಕ್ಷಪಾತದ ವರ್ತನೆ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಸರಕಾರಕ್ಕೆ ಉಂಟಾಗಬಹುದಾಗಿದ್ದ ಮುಖಭಂಗ ತಪ್ಪಿಸಲು ಲೋಕಸಭಾಧ್ಯಕ್ಷರು ಪಕ್ಷಪಾತದಿಂದ ವರ್ತಿಸಿದರು.

ಈ ಬಾರಿ ಸಂಸತ್ ಅಧಿವೇಶನ ಸುಗಮವಾಗಿ ನಡೆದಿದ್ದರೆ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ನಡೆದ ವಂಚನೆ, ಬ್ಯಾಂಕ್‌ಗಳಿಗೆ ವಂಚನೆ ಮಾಡಿ ನೀರವ್ ಮೋದಿ ಮತ್ತು ವಿಜಯ ಮಲ್ಯ ವಿದೇಶಕ್ಕೆ ಪಲಾಯನ ಮಾಡಿದ ಸಂಗತಿ, ನೋಟು ಅಮಾನ್ಯೀಕರಣದ ಪರಿಣಾಮ, ರೈತರ ಹೋರಾಟ ಹಾಗೂ ಕಾಶ್ಮೀರ ಸಮಸ್ಯೆ ಇಂತಹ ಅನೇಕ ಮಹತ್ವದ ವಿಷಯಗಳು ಚರ್ಚೆಗೆ ಬರುತ್ತಿದ್ದವು. ಆದರೆ, ಈ ವಿಷಯಗಳ ಬಗ್ಗೆ ಚರ್ಚೆ ನಡೆದರೆ ಪ್ರಶ್ನೆಗಳಿಗೆ ಉತ್ತರಿಸಲು ಸರಕಾರ ಸಿದ್ಧವಿರಲಿಲ್ಲ ಅಥವಾ ಸರಕಾರದ ಬಳಿ ಸೂಕ್ತ ಉತ್ತರವಿರಲಿಲ್ಲ. ಆದ್ದರಿಂದ ಸರಕಾರವನ್ನು ಇಕ್ಕಟ್ಟಿನಿಂದ ಪಾರು ಮಾಡಲು ಲೋಕಸಭಾಧ್ಯಕ್ಷರು ಪಕ್ಷಪಾತದ ವರ್ತನೆಯ ಆರೋಪಕ್ಕೆ ಗುರಿಯಾಗಬೇಕಾಯಿತು. ದೇಶದ ಆಡಳಿತ ನಡೆಸಲು ವಿಫಲಗೊಂಡ ಪಕ್ಷವೊಂದು ಇಕ್ಕಟ್ಟಿಗೆ ಸಿಲುಕಿದಾಗ ಸಂಸತ್‌ನ್ನು ಎದುರಿಸಲು ಹೆದರುತ್ತದೆ. ಸರಕಾರ ಈ ರೀತಿ ವರ್ತಿಸಿದಾಗ ಕಲಾಪ ಹಾಳಾಗುತ್ತದೆ. ಸಂಸತ್‌ನ ಉಭಯ ಸದನಗಳ ಒಂದು ದಿನದ ಕಲಾಪಕ್ಕೆ ಜನತೆಯ ತೆರಿಗೆಯ ಹಣದಿಂದ ಲಕ್ಷಾಂತರ ರೂ. ವೆಚ್ಚವಾಗುತ್ತದೆ. ಜನತೆಯಿಂದ ಚುನಾಯಿತವಾದ ಈ ಸದನದಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಮಹತ್ವದ ಪ್ರಶ್ನೆಗಳು ಚರ್ಚೆಯಾಗಬೇಕಾಗುತ್ತದೆ. ಜನರ ಸಮಸ್ಯೆಗಳು ಚರ್ಚೆಯಾದರೆ ಕಲಾಪ ಅರ್ಥಪೂರ್ಣವೆನಿಸುತ್ತದೆ.

ಆದರೆ, ಸದನದಲ್ಲಿ ಜನತೆಯಿಂದ ಚುನಾಯಿತರಾದ ಪ್ರತಿನಿಧಿಗಳು ಒಮ್ಮೆಮ್ಮೆ ಅತಿರೇಕದಿಂದ ವರ್ತಿಸುತ್ತಾರೆ. ಭಾರತದ ಸಂಸತ್ತಿನ ಕಲಾಪದ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾಲದಲ್ಲಿದ್ದಂತಹ ಸಂಸತ್ತಿನ ಕಲಾಪ ಈಗಿಲ್ಲ. ನೆಹರೂ ಒತ್ತಟ್ಟಿಗಿರಲಿ. ವಾಜಪೇಯಿ ಮತ್ತು ದೇವೇಗೌಡರ ಕಾಲದಲ್ಲಿ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳ ಗುಣಮಟ್ಟವೂ ಈಗ ಉಳಿದಿಲ್ಲ. ಅದಕ್ಕೆ ಕಾರಣ ಸಂಸತ್ತಿನ ಉಭಯ ಸದನಗಳಲ್ಲಿ ವೈಚಾರಿಕ ನೆಲೆಯಲ್ಲಿ ಮಾತನಾಡುವ ಸಂಸದೀಯ ಪಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ತಮ್ಮ ವ್ಯಾಪಾರಿ ಹಿತಾಸಕ್ತಿಗಳಿಗಾಗಿ ಸಂಸತ್ತಿನ ಉಭಯ ಸದನಗಳನ್ನು ಪ್ರವೇಶಿಸುವ ಉದ್ಯಮಿಗಳು, ರಿಯಲ್ ಎಸ್ಟೇಟ್ ವ್ಯಾಪಾರಿಗಳು, ಗಣಿದಂಧೆಯಲ್ಲಿ ತೊಡಗಿದವರು ಹೆಚ್ಚಿನ ಸಂಖ್ಯೆಯಲ್ಲಿ ಸದನವನ್ನು ಪ್ರವೇಶಿಸುತ್ತಿರುವುದರಿಂದ ಸದನದ ಕಲಾಪದ ಗುಣಮಟ್ಟ ಕುಸಿಯುತ್ತಿದೆ. ಇದರೊಂದಿಗೆ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅನೇಕ ವ್ಯಕ್ತಿಗಳು ಸಂಸತ್‌ನ್ನು ಪ್ರವೇಶಿಸಿದ್ದಾರೆ. ಇದು ಕೂಡಾ ಆತಂಕದ ಸಂಗತಿಯಾಗಿದೆ. ಈ ಬಾರಿಯಂತೂ ಸದನದ ಕಲಾಪ ಹಾಳಾಗಲು ಕೇಂದ್ರ ಸರಕಾರವೇ ಕಾರಣ. ಕೇಂದ್ರ ಸರಕಾರ ಸಕಾರಾತ್ಮಕವಾಗಿ ವರ್ತಿಸಿದ್ದರೆ ಹಳಿ ತಪ್ಪಿದ ಸದನದ ಕಲಾಪವನ್ನು ಮತ್ತೆ ಹಳಿಗೆ ತರಲು ಸಾಧ್ಯವಾಗುತ್ತಿತ್ತು. ಆದರೆ, 23 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಸುಗಮವಾಗಿ ಕಲಾಪ ನಡೆಯುವಂತಹ ವಾತಾವರಣವನ್ನು ಸರಕಾರ ನಿರ್ಮಿಸಲೇ ಇಲ್ಲ. ಈ ತಪ್ಪಿನ ಹೊಣೆಯನ್ನು ಪ್ರತಿಪಕ್ಷಗಳ ಮೇಲೆ ಹಾಕಿದ ಬಿಜೆಪಿ ಸಂಸದರು ಕಲಾಪ ವ್ಯರ್ಥವಾದ ದಿನಗಳ ಸಂಬಳ ಪಡೆಯುವುದಿಲ್ಲ ಎಂದು ಹೇಳಿಕೆ ನೀಡಿ ಹೊಯಿಂದ ಜಾರಿಕೊಂಡರು. ಆದರೆ, ಸಂಬಳ ನಿರಾಕರಣೆಯ ಪ್ರಹಸನದಿಂದ ಬಿಜೆಪಿ ತನ್ನ ಹೊಣೆಯಿಂದ ಜಾರಿಸಿಕೊಳ್ಳುವಂತಿಲ್ಲ.

ಭಾರತದ ಸಂಸತ್ತಿಗೆ ಜಗತ್ತಿನ ಪ್ರಜಾಪ್ರಭುತ್ವ ಹೊಂದಿದ ದೇಶಗಳಲ್ಲಿ ಗೌರವವಿದೆ. ನಮ್ಮ ದೇಶದ ಸಂಸತ್ ಕಲಾಪಗಳನ್ನು ಅನೇಕ ದೇಶಗಳ ಪರಿಣಿತರು ಆಸಕ್ತಿಯಿಂದ ಗಮನಿಸುತ್ತಿರುತ್ತಾರೆ. ಆದರೆ, ಇತ್ತೀಚೆಗೆ ಸದನದಲ್ಲಿ ನಡೆಯುತ್ತಿರುವ ಕೋಲಾಹಲ ಮತ್ತು ಗದ್ದಲಗಳನ್ನು ನೋಡಿದರೆ ನಮ್ಮ ಸಂಸತ್ತಿನ ಪರಂಪರೆಗೆ ಚ್ಯುತಿ ಉಂಟಾಗುತ್ತದೆ ಏನೋ ಎಂಬ ಕಳವಳ ಉಂಟಾಗುತ್ತದೆ. ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಪ್ರತಿಪಕ್ಷಗಳು ಮಾತ್ರವಲ್ಲ, ಆಡಳಿತ ಪಕ್ಷವೂ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಅಂತಹ ಜವಾಬ್ದಾರಿ ದೇಶದ ಇಂದಿನ ಆಡಳಿತ ಪಕ್ಷದಲ್ಲಿ ಕಾಣುತ್ತಿಲ್ಲ. ಸಂಸತ್ತಿನ ಇತ್ತೀಚಿನ ಬಜೆಟ್ ಅಧಿವೇಶನ ಯಾವುದೇ ಕಲಾಪ ನಡೆಯದೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದು ನಾಚಿಕೆಗೇಡಿನ ಸಂಗತಿ. ಸರಕಾರ ಮತ್ತು ಪ್ರತಿಪಕ್ಷಗಳು ಇನ್ನು ಮುಂದಾದರೂ ಹೀಗಾಗದಂತೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗಿದೆ. ಸಂಸತ್ತಿನ ಕಲಾಪವನ್ನು ದೃಶ್ಯ ಮಾಧ್ಯಮದ ಮೂಲಕ ದೇಶದ ಜನ ನಿತ್ಯವೂ ನೋಡುತ್ತಿರುತ್ತಾರೆ. ತಾವು ಚುನಾಯಿಸಿದ ಪ್ರತಿನಿಧಿಗಳು ಈ ರೀತಿ ಅಸಭ್ಯವಾಗಿ ವರ್ತಿಸುವುದನ್ನು ಕಂಡು ಜನರಲ್ಲಿ ಒಂದು ವಿಧದ ಹತಾಶೆಯ ಮನೋಭಾವ ಉಂಟಾಗುತ್ತದೆ. ಇಂತಹ ಹತಾಶೆಯ ಮನೋಭಾವ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಸಂಸತ್ತಿನ ಉಭಯ ಸನದಗಳ ಅಧಿವೇಶನಕ್ಕೆ ಮುನ್ನ ಲೋಕಸಭಾಧ್ಯಕ್ಷರು ಸರಕಾರದ ಪ್ರತಿನಿಧಿಗಳ ಮತ್ತು ಪ್ರತಿಪಕ್ಷಗಳ ಧುರೀಣರ ಸಭೆ ಕರೆದು ಸದನದ ಕಲಾಪವನ್ನು ಸುಗಮವಾಗಿ ನಡೆಯಲು ಸಂಧಾನ ಸೂತ್ರ ರೂಪಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News